ಖ್ಯಾತ ನಟ ರಿಷಿ ಕಪೂರ್​ ಜನ್ಮದಿನ; ಅಪರೂಪದ ಫೋಟೋ ಮೂಲಕ ಸ್ಮರಿಸಿಕೊಂಡ ಕುಟುಂಬದವರು

| Updated By: ಮದನ್​ ಕುಮಾರ್​

Updated on: Sep 04, 2023 | 7:22 PM

ಇಂದು (ಸೆಪ್ಟೆಂಬರ್ 4) ಬಾಲಿವುಡ್ ನಟ ರಿಷಿ ಕಪೂರ್ ಜನ್ಮದಿನ. 90ಕ್ಕೂ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಆದರೆ ಅವರು ದುರಾದೃಷ್ಟಾವಶಾತ್ ತಮ್ಮ 67ನೇ ವಯಸ್ಸಿಗೆ ಬ್ಲಡ್ ಕ್ಯಾನ್ಸರ್​ನಿಂದ ಮರಣ ಹೊಂದಿದರು. ಇಂದು ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ.

ಖ್ಯಾತ ನಟ ರಿಷಿ ಕಪೂರ್​ ಜನ್ಮದಿನ; ಅಪರೂಪದ ಫೋಟೋ ಮೂಲಕ ಸ್ಮರಿಸಿಕೊಂಡ ಕುಟುಂಬದವರು
ರಿಷಿ ಕಪೂರ್​, ರಿಧಿಮಾ ಕಪೂರ್, ರಣಬೀರ್ ಕಪೂರ್​
Follow us on

ಬಾಲಿವುಡ್ ನಟ ರಿಷಿ ಕಪೂರ್ (Rishi Kapoor) ನಮ್ಮ ಜೊತೆಯಿದ್ದರೆ ಇಂದು (ಸೆಪ್ಟೆಂಬರ್ 4) ಅವರು 71ನೇ ವರ್ಷದ ಹುಟ್ಟುಹಬ್ಬವನ್ನು (Rishi Kapoor Birthday) ಆಚರಿಸಿಕೊಳ್ಳಬೇಕಿತ್ತು. 1952ರಲ್ಲಿ ಜನಿಸಿದ ಅವರು, ಹಿಂದಿ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಅನಾರೋಗ್ಯದಿಂದ 2020ರ ಏಪ್ರಿಲ್ 30ರಂದು ಮುಂಬೈನಲ್ಲಿ ಮರಣ ಹೊಂದಿದರು. ಅವರ ಹುಟ್ಟುಹಬ್ಬದಂದು ನೀತೂ ಕಪೂರ್​, ರಿಧಿಮಾ ಕಪೂರ್​, ಕರೀನಾ ಕಪೂರ್ ಮತ್ತಿತರರು ಸಾಮಾಜಿಕ ಜಾಲತಾಣದಲ್ಲಿ ಫೋಟೋ (Rishi Kapoor photo) ಹಂಚಿಕೊಂಡಿದ್ದಾರೆ. ಆ ಮೂಲಕ ಅವರನ್ನು ಸ್ಮರಿಸಿದ್ದಾರೆ. 1970ರಲ್ಲಿ ತೆರೆಕಂಡ ‘ಮೇರಾ ನಾಮ್ ಜೋಕರ್’ ರಿಷಿ ಕಪೂರ್ ನಟಿಸಿದ ಮೊದಲ ಚಿತ್ರ. ನಟ, ನಿರ್ದೇಶಕ ರಾಜ್ ಕಪೂರ್ ಅವರ 2ನೇ ಮಗನಾದ ರಿಷಿ ಕೂಡ ತಂದೆಯಂತೆಯೇ ನಟನೆಯಲ್ಲಿ ತೊಡಗಿಕೊಂಡರು.

ನೀತು ಕಪೂರ್, ರಿಧಿಮಾ ಕಪೂರ್, ಕರೀನಾ ಕಪೂರ್, ಸಂಜಯ್ ದತ್, ರಾಕೇಶ್ ರೋಷನ್ ಮೊದಲಾದವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಿಷಿ ಕಪೂರ್ ಫೋಟೋ ಹಂಚಿಕೊಂಡು ಅವರನ್ನು ನೆನೆದಿದ್ದಾರೆ. ನೀತೂ ಕಪೂರ್ ಅವರು ರಿಷಿ ಅಭಿನಯದ ಹಲವು ಸಿನಿಮಾಗಳ ತುಣುಕನ್ನು ಹಂಚಿಕೊಂಡಿದ್ದಾರೆ. ರಿಧಿಮಾ ಕಪೂರ್ ಬಾಲ್ಯದ ಕೆಲ ಫೋಟೋಗಳನ್ನು ಹಂಚಿಕೊಂಡು ‘ಪಾಪಾ ಕಿ ಕಾರ್ಬನ್ ಕಾಪಿ’ ಎಂದು ಬರೆದುಕೊಂಡಿದ್ದಾರೆ. ನಟಿ ಕರೀನಾ ಕಪೂರ್ ಅವರು ರಿಷಿ ಕಪೂರ್ ಜೊತೆಗಿನ ಹಳೆಯ ಫೋಟೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆಲಿಯಾ, ದೀಪಿಕಾ, ಕತ್ರಿನಾ​ ಅಲ್ಲ, ರಣಬೀರ್​ ಕಪೂರ್ ಮದುವೆಯನ್ನು​ ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್​

ರಿಷಿ ಕಪೂರ್ ಅವರು 1970ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಾವು ಮೊದಲ ಬಾರಿ ನಟಿಸಿದ ‘ಮೇರಾ ನಾಮ್ ಜೋಕರ್’ ಸಿನಿಮಾಕ್ಕೆ ‘ಅತ್ಯುತ್ತಮ ಬಾಲನಟ’ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡರು. 92 ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದ್ದಾರೆ. ‘ಬಾಬಿ’, ‘ಚಾಂದಿನಿ’, ‘ದೀವಾನ’, ‘ನಾಗಿನ್’ ಮುಂತಾದವು ಅವರ ಪ್ರಮುಖ ಚಿತ್ರಗಳು. ರಿಷಿ ಕಪೂರ್​ ನಟಿಸಿದ ಕೊನೇ ಸಿನಿಮಾ ‘ಶರ್ಮಾಜೀ ನಮ್ಕೀನ್’. ಈ ಸಿನಿಮಾದ ಕೆಲ ಭಾಗಗಳನ್ನು ಪೂರ್ಣಗೊಳಿಸುವ ಮೊದಲೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

‘ಕಪೂರ್ ಆ್ಯಂಡ್ ಸನ್ಸ್’ ಸಿನಿಮಾದಲ್ಲಿನ ನಟನೆಗೆ ರಿಷಿ ಕಪೂರ್​ ಅವರು ‘ಝೀ ಸಿನಿಮಾ ಬೆಸ್ಟ್ ಕಾಮಿಕ್ ಆ್ಯಕ್ಟರ್’ ಅವಾರ್ಡ್ ಪಡೆದುಕೊಂಡರು. ‘ಮುಲ್ಕ್’ ಸಿನಿಮಾದಲ್ಲಿ ಇವರ ನಟನೆಯು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. 1980ರಲ್ಲಿ ರಿಷಿ ಕಪೂರ್ ಹಾಗೂ ನೀತೂ ಸಿಂಗ್ ಮದುವೆಯಾದರು. ರಣಬೀರ್ ಕಪೂರ್, ರಿಧಿಮಾ ಕಪೂರ್ ಇವರ ಮಕ್ಕಳು. 67ನೇ ವಯಸ್ಸಿಗೆ ರಿಷಿ ಕಪೂರ್​ ಅವರು ಬ್ಲಡ್ ಕ್ಯಾನ್ಸರ್​ನಿಂದ ಮರಣ ಹೊಂದಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.