Rituraj Singh: ಹೃದಯಾಘಾತದಿಂದ ಖ್ಯಾತ ನಟ ರಿತುರಾಜ್​ ಸಿಂಗ್ ನಿಧನ; ಕಂಬನಿ ಮಿಡಿದ ಬಾಲಿವುಡ್​

|

Updated on: Feb 20, 2024 | 3:23 PM

ಅನೇಕ ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ರಿತುರಾಜ್​ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಶಾಕ್​ ಆಗಿದೆ. ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಅವರ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ.

Rituraj Singh: ಹೃದಯಾಘಾತದಿಂದ ಖ್ಯಾತ ನಟ ರಿತುರಾಜ್​ ಸಿಂಗ್ ನಿಧನ; ಕಂಬನಿ ಮಿಡಿದ ಬಾಲಿವುಡ್​
ರಿತುರಾಜ್​ ಸಿಂಗ್​
Follow us on

ಹಿಂದಿ ಕಿರುತೆರೆ ಮತ್ತು ಬಾಲಿವುಡ್​ನಲ್ಲಿ ಖ್ಯಾತಿ ಪಡೆದಿದ್ದ ಹಿರಿಯ ನಟ ರಿತುರಾಜ್​ ಸಿಂಗ್ (Rituraj Singh) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ರಿತುರಾಜ್​ ಸಿಂಗ್ ಅವರ ನಿಧನದ (Rituraj Singh Death) ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ‘ಅನುಪಮಾ’, ‘ಕುಲವಧು’, ‘ಕುಟುಂಬ್​’, ‘ಸಿಐಡಿ’, ‘ಅದಾಲತ್​’ ಮುಂತಾದ ಸೀರಿಯಲ್​ಗಳಲ್ಲಿ ರಿತುರಾಜ್ ಸಿಂಗ್​ ಅಭಿನಯಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ರಿತುರಾಜ್ ಸಿಂಗ್​ ಅವರಿಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.

ಮುಂಬೈನ ತಮ್ಮ ನಿವಾಸದಲ್ಲೇ ರಿತುರಾಜ್ ಸಿಂಗ್​ ಅವರಿಗೆ ಹೃದಯಾಘಾತ ಆಗಿದೆ. ‘ಅನಾರೋಗ್ಯದ ಕಾರಣದಿಂದ ಕೆಲವೇ ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುಣಮುಖರಾದ ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಯಲ್ಲೇ ಅವರಿಗೆ ಮಧ್ಯರಾತ್ರಿ 12.30ಕ್ಕೆ ಹೃದಯಾಘಾತ ಆಯಿತು’ ಎಂದು ಅವರ ಆಪ್ತರಾದ ಅಮಿತ್​ ಬೆಹ್ಲ್​ ಅವರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ಕಿರುತೆರೆ ಕಲಾವಿದೆಗೆ ಹೃದಯಾಘಾತ; ನಟಿ, ನಿರ್ದೇಶಕಿ ಕವಿತಾ ಚೌಧರಿ ನಿಧನ

ರಿತುರಾಜ್ ಸಿಂಗ್​ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಪ್ರಾರ್ಥಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳು ಮಾತ್ರವಲ್ಲದೇ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ರಿತುರಾಜ್​ ಸಿಂಗ್​ ಅವರು ಜನಪ್ರಿಯತೆ ಪಡೆದಿದ್ದರು. ಒಟಿಟಿಯಲ್ಲಿ ಪ್ರಸಾರವಾದ ವೆಬ್​ ಸರಣಿಗಳಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದರು. ‘ಬಂದಿಶ್​ ಬ್ಯಾಂಡಿಟ್ಸ್​’, ‘ಮೇಡ್​ ಇನ್​ ಹೆವೆನ್​’, ‘ಇಂಡಿಯನ್​ ಪೊಲೀಸ್​ ಫೋರ್ಸ್​’ ವೆಬ್​ಸೀರಿಸ್​ಗಳಲ್ಲಿ ರಿತುರಾಜ್​ ಸಿಂಗ್​ ನಟಿಸಿದ್ದರು.

‘ಬದ್ರಿನಾಥ್​ ಕಿ ದುಲ್ಹನಿಯಾ’, ‘ಸತ್ಯಮೇವ ಜಯತೆ 2’ ಮುಂತಾದ ಸಿನಿಮಾಗಳಲ್ಲಿ ರಿತುರಾಜ್​ ಸಿಂಗ್​ ಅವರು ಪೋಷಕ ಪಾತ್ರಗಳನ್ನು ಮಾಡಿದ್ದರು. ನಿರ್ದೇಶಕರಾದ ಹನ್ಸಲ್​ ಮೆಹ್ತಾ, ವಿವೇಕ್​ ಅಗ್ನಿಹೋತ್ರಿ, ನಟರಾದ ಸೋನು ಸೋದ್​, ಅರ್ಷದ್​ ವಾರ್ಸಿ, ಸೋನು ಸೂದ್​ ಮುಂತಾದವರು ರಿತುರಾಜ್​ ಸಿಂಗ್​ ನಿಧನಕ್ಕೆ ಕಂಬನಿ ಮಿಡಿದ್ದಾರೆ.

‘ಕಲಾವಿದ ಎಂದಿಗೂ ಸಾಯುವುದಿಲ್ಲ. ಓಂ ಶಾಂತಿ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಪೋಸ್ಟ್​ ಮಾಡಿದ್ದಾರೆ. ರಿತುರಾಜ್​ ಸಿಂಗ್​ ಅವರ ಜೊತೆಗಿನ ಒಡನಾಟವನ್ನು ಹನ್ಸಲ್​ ಮೆಹ್ತಾ ಅವರು ಮೆಲುಕು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ