ಮುಂದಕ್ಕೆ ಹೋಗುತ್ತಾ ‘ಪೆದ್ದಿ’ ಸಿನಿಮಾ? ಉತ್ತರಕ್ಕೆ ಕಾದಿರುವ ರಾಮ್ ಚರಣ್ ಫ್ಯಾನ್ಸ್
ಏ.30ರಂದು ಬಿಡುಗಡೆ ಆಗಬೇಕಿರುವ ‘ಪೆದ್ದಿ’ ಸಿನಿಮಾ ಮುಂದಕ್ಕೆ ಹೋಗುತ್ತಾ ಎಂಬ ಪ್ರಶ್ನೆ ಇದೆ. ಅದರಿಂದಾಗಿ ಸ್ಟಾರ್ ನಟ ರಾಮ್ ಚರಣ್ ಅವರ ಅಭಿಮಾನಿಗಳಿಗೆ ಈಗಾಗಲೇ ಚಿಂತೆ ಶುರುವಾಗಿದೆ. ರಾಮ್ ಚರಣ್ ಅವರ ಹುಟ್ಟುಹಬ್ಬದ ದಿನ ಈ ಎಲ್ಲ ಅನುಮಾನಗಳಿಗೆ ತೆರೆ ಬೀಳುವುದು ಖಚಿತ.

‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಮತ್ತು ‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾ ಬಗ್ಗೆ ಕಳೆದ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿವೆ. ಈ ಪ್ಯಾನ್ ಇಂಡಿಯಾ ಚಿತ್ರವು ನಿಗದಿತ ಸಮಯಕ್ಕೆ ಬಿಡುಗಡೆಯಾಗುವುದಿಲ್ಲ ಎಂಬ ಗಾಳಿಸುದ್ದಿಯಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ. ಅದಕ್ಕಾಗಿ ರಾಮ್ ಚರಣ್ (Ram Charan) ಫ್ಯಾನ್ಸ್ ಕಾದಿದ್ದಾರೆ.
‘ಪೆದ್ದಿ’ ಸಿನಿಮಾದ ಕೆಲಸಗಳು ಬಾಕಿ ಇರುವುದರಿಂದ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಲಿದೆ ಎಂಬ ವದಂತಿಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆದು ರಾಮ್ ಚರಣ್ ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿ ಆಗಿದೆ. ಆದರೆ, ಚಿತ್ರತಂಡದ ಆಪ್ತ ಮೂಲಗಳ ಪ್ರಕಾರ, ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಹಿಂದೆ ಯೋಜಿಸಿದಂತೆಯೇ ಏಪ್ರಿಲ್ 30ರಂದು ಚಿತ್ರವು ವಿಶ್ವಾದ್ಯಂತ ತೆರೆಕಾಣಲಿದೆ.
ರಾಮ್ ಚರಣ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪಷ್ಟನೆ ಸಿಗಲಿದೆ. ಕೇಳಿಬಂದಿರುವ ವದಂತಿಗಳಿಗೆ ಖಡಕ್ ಉತ್ತರ ನೀಡಲು ಚಿತ್ರತಂಡ ಸಜ್ಜಾಗಿದೆ. ಈ ವಾರ, ಅಂದರೆ ಮಾರ್ಚ್ 27ರಂದು ರಾಮ್ ಚರಣ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಈ ವಿಡಿಯೋ ಮೂಲಕ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಮರುಖಚಿತಪಡಿಸಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಒಮ್ಮೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮಾರ್ಚ್ 27ರಿಂದ ಏಪ್ರಿಲ್ 30ಕ್ಕೆ ಮುಂದೂಡಲಾಗಿತ್ತು. ಹಾಗಾಗಿ ಮತ್ತೊಮ್ಮೆ ದಿನಾಂಕ ಬದಲಾಯಿಸುವ ಉದ್ದೇಶ ಚಿತ್ರತಂಡಕ್ಕಿಲ್ಲ. ಸಿನಿಮಾ ತಂಡವು ಹಗಲಿರುಳು ಶ್ರಮಿಸುತ್ತಿದ್ದು, ನಿಗದಿತ ಸಮಯಕ್ಕೆ ಚಿತ್ರವನ್ನು ಥಿಯೇಟರ್‌ಗೆ ತರಲು ಸಿದ್ಧತೆ ನಡೆಸುತ್ತಿದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ವೃದ್ಧಿ ಸಿನಿಮಾಸ್ ಸಂಸ್ಥೆ ಈ ಬೃಹತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್?
‘ಪೆದ್ದಿ’ ಚಿತ್ರದಲ್ಲಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಕನ್ನಡದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಇವರ ಜೊತೆಗೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಕೂಡ ತಾರಾಗಣದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




