
ಮುಂಬೈನ ಆರ್ಎ ಸ್ಟುಡಿಯೋನಲ್ಲಿ (RA Studio) ಹಾಡ ಹಗಲೆ ರೋಹಿತ್ ಆರ್ಯ ಹೆಸರಿನ ವ್ಯಕ್ತಿಯೊಬ್ಬ 19 ಮಂದಿಯನ್ನು ಅದರಲ್ಲಿ 17 ಮಂದಿ ಮಕ್ಕಳನ್ನು ಅಪಹರಣ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಘಟನೆ ದೇಶದ ಗಮನ ಸೆಳೆದಿದೆ. ಅಪಹರಣಕಾರನು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆದರೆ ರೋಹಿತ್ ಆರ್ಯ ಅಪಹರಣಕ್ಕೆ ಮುಂಚೆ ಹಾಕಿದ್ದ ಯೋಜನೆಗಳು ಏನಾಗಿದ್ದವು, ಅವನ ಬೇಡಿಕೆಗಳು ಏನಾಗಿತ್ತು, ರೋಹಿತ್ ಆರ್ಯ ಸ್ಟುಡಿಯೋದ ಒಳಗೆ ಮಕ್ಕಳ ಮೇಲೆ ಹೇಗೆ ಅಟ್ಟಹಾಸ ಮೆರೆದಿದ್ದ ಎಂಬೆಲ್ಲ ವಿಷಯಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.
ರೋಹಿತ್ ಆರ್ಯ, ಮಕ್ಕಳನ್ನು ಒತ್ತೆ ಆಳುಗಳನ್ನಾಗಿ ಇರಿಸಿಕೊಂಡ ಬಳಿಕ ಸುಮಾರು ಐದು ಮಕ್ಕಳ ಕೈಗಳನ್ನು ಕಟ್ಟಿಹಾಕಿ ಅವರ ಬಾಯಿಗೆ ಟೇಪ್ ಅಂಟಿಸಿದ್ದನಂತೆ. ಸ್ಟುಡಿಯೋದ ಗಾಜಿನ ಕಿಟಕಿ ಮೂಲಕ ಈ ದೃಶ್ಯ ಕಾಣಿಸಿದ್ದಾಗಿ ಪೊಲೀಸರು ಎಫ್ಐಆರ್ನಲ್ಲಿ ನಮೂದಿಸಿದ್ದಾರೆ. ಇನ್ನು ಪೊಲೀಸರು ಡಕ್ ಮೂಲಕ ಸ್ಟುಡಿಯೋದ ಮೊದಲ ಫ್ಲೋರ್ನಲ್ಲಿ ಬಾತ್ರೂಂಗೆ ಹೋದಾಗ ಅವರ ಮೂಗಿಗೆ ಪೆಟ್ರೋಲ್ ವಾಸನೆ ಗಾಢವಾಗಿ ಬಡಿಯಿತಂತೆ.
ರೋಹಿತ್, ಮಕ್ಕಳ ಮೇಲೆ ಪೆಟ್ರೋಲ್ ಸುರಿದಿದ್ದನಂತೆ. ಜೊತೆಗೆ ರಬ್ಬರ್ ಸೊಲ್ಯೂಷನ್ ಅನ್ನು ಸಹ ನೆಲದ ಮೇಲೆ ಚೆಲ್ಲಿದ್ದನಂತೆ. ಪೊಲೀಸರು ಬಾತ್ರೋಂಗೆ ಹೋದಾಗ ರೋಹಿತ್ ಆರ್ಯನ ಸೊಂಟದಲ್ಲಿ ಬಂದೂಕು ಇರುವುದು ಪೊಲೀಸರಿಗೆ ಕಂಡಿತಂತೆ. ಪೊಲೀಸರನ್ನು ನೋಡಿದ ಕೂಡಲೇ ರೋಹಿತ್ ಆರ್ಯ ಮೊದಲು ಪೆಪ್ಪರ್ ಸ್ಪ್ರೇ ಹೊಡೆದನಂತೆ. ಬಳಿಕ ಸೊಂಟದಲ್ಲಿರುವ ಏರ್ ಗನ್ ಕೈಗೆ ತೆಗೆದುಕೊಂಡು ಒಮ್ಮೆ ಮಕ್ಕಳ ಕಡೆಗೆ ಗುರಿ ಮಾಡಿ, ಬಳಿಕ ಪೊಲೀಸರ ಕಡೆಗೆ ಗುರಿ ಮಾಡಿದನಂತೆ, ಕೂಡಲೇ ಅಮೋಲ್ ದಾವ್ಡೆಕರ್ ಹೆಸರಿನ ಪೊಲೀಸ್ ಅಧಿಕಾರಿ ತಮ್ಮ ಸರ್ವೀಸ್ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ:ಮಕ್ಕಳ ಅಪಹರಣಕ್ಕೆ ಮುಂಚೆ ರೋಹಿತ್ ಮಾಡಿದ್ದ ತಯಾರಿ, ಪೊಲೀಸರೇ ಶಾಕ್
ಗುಂಡು ತಗುಲಿ ಗಾಯಗೊಂಡ ರೋಹಿತ್ ಆರ್ಯನನ್ನು ಕೂಡಲೇ ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೋಹಿತ್ ನಿಧನ ಹೊಂದಿದ್ದಾನೆ. ಇದೀಗ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರೇ ದೂರುದಾರರಾಗಿ ಎಫ್ಐಆರ್ ದಾಖಲು ಮಾಡಿದ್ದಾರೆ.
‘ಲೆಟ್ಸ್ ಚೇಂಜ್’ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಆರ್ಯ, ಇನ್ನೂ ಕೆಲ ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದ. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೆಲವು ಸ್ವಚ್ಛತೆ ಕುರಿತಾದ ಕೆಲ ಕಾರ್ಯಕ್ರಮಗಳನ್ನು ಸಹ ಮಾಡಿದ್ದ. ಆದರೆ ತನಗೆ ನೀಡಬೇಕಾದ ಮನ್ನಣೆ ನೀಡಿಲ್ಲವೆಂದು, ಹಣ ನೀಡಿಲ್ಲವೆಂದು ಆರೋಪಿಸಿ ಮಕ್ಕಳನ್ನು ಅಪಹರಿಸಿದ್ದ. ಈ ಮೊದಲೂ ಸಹ ಮಾಜಿ ಶಿಕ್ಷಣ ಸಚಿವರ ಮನೆ ಎದುರು ಉಪವಾಸ ಸತ್ಯಾಗ್ರಹಗಳನ್ನು ರೋಹಿತ್ ಆರ್ಯ ಮಾಡಿದ್ದ. ಈಗ ಅಪಹರಣ ಮಾಡಲು ಹೋಗಿ ಪೊಲೀಸರ ಗುಂಡಿನಿಂದ ಸಾವನ್ನಪ್ಪಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Sat, 1 November 25