ಮಕ್ಕಳ ಅಪಹರಣಕ್ಕೆ ಮುಂಚೆ ರೋಹಿತ್ ಮಾಡಿದ್ದ ತಯಾರಿ, ಪೊಲೀಸರೇ ಶಾಕ್
Rohit Arya case: ಮುಂಬೈನಲ್ಲಿ ನಿನ್ನೆ ವ್ಯಕ್ತಿಯೊಬ್ಬ 17 ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಘಟನೆ ದೇಶದಾದ್ಯಂತ ಸುದ್ದಿ ಆಗಿದೆ. ರೋಹಿತ್ ಆರ್ಯ, ಪೊಲೀಸರ ಗುಂಡಿಗೆ ಸಾವನ್ನಪ್ಪಿದ್ದಾನೆ. ಆದರೆ ಆತ ಈ ಕಾರ್ಯ ಮಾಡುವ ಮುಂಚೆ ಮಾಡಿದ್ದ ಯೋಜನೆ ಸ್ವತಃ ಪೊಲೀಸರಿಗೆ ಆಶ್ಚರ್ಯ ತಂದಿದೆ.

ಮುಂಬೈನ (Mumbai) ಆರ್ಎ ಸ್ಟುಡಿಯೋನಲ್ಲಿ ನಿನ್ನೆ ನಡೆದಿರುವ ಸಿನಿಮೀಯ ಘಟನೆ ದೇಶದ ಗಮನ ಸೆಳೆದಿದೆ. ರೋಹಿತ್ ಆರ್ಯ ಹೆಸರಿನ ವ್ಯಕ್ತಿಯೊಬ್ಬ 17 ಮಕ್ಕಳನ್ನು ಸ್ಟುಡಿಯೋದ ಒಳಗೆ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ. ತನ್ನ ಬೇಡಿಕೆ ಈಡೇರಿಸದೇ ಇದ್ದಲ್ಲಿ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ರೋಹಿತ್ ಆರ್ಯನ್ ಅನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಆದರೆ ರೋಹಿತ್, ಈ ಅಪಹರಣಕ್ಕೆ ಮಾಡಿದ್ದ ತಯಾರಿ ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಈ ಮುಂಚೆ ಕೆಲ ಸಿನಿಮಾ, ಸರ್ಕಾರದ ಕಾರ್ಯಕ್ರಮಗಳಲ್ಲಿಯೂ ಭಾಗಿ ಆಗಿದ್ದ ಅಸಲಿಗೆ ರೋಹಿತ್ ಆರ್ಯಗೆ ಕೆಲ ನಟ, ನಟಿಯರ ಪರಿಚಯವೂ ಇತ್ತು. ತಾನು ಮಕ್ಕಳ ಕಳ್ಳಸಾಗಣೆ ಬಗ್ಗೆ ಥ್ರಿಲ್ಲರ್ ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡುತ್ತಿರುವುದಾಗಿ ಹೇಳಿ ಅದಕ್ಕಾಗಿ ಸುಮಾರು 800 ಮಕ್ಕಳಿಂದ ಆಡಿಷನ್ ವಿಡಿಯೋಗಳನ್ನು ತರಿಸಿಕೊಂಡಿದ್ದ. ಅದರಲ್ಲಿ 70 ಅನ್ನು ಅಂತಿಮಗೊಳಿಸಿದ್ದ. ಬಳಿಕ ಅವುಗಳಲ್ಲಿ ಇನ್ನೂ ಹಲವರನ್ನು ಫಿಲ್ಟರ್ ಮಾಡಿ ಅಂತಿಮವಾಗಿ 12 ರಿಂದ 15 ವರ್ಷ ವಯಸ್ಸಿನ 17 ಮಕ್ಕಳನ್ನು ಅಂತಿಮಗೊಳಿಸಿದ್ದ.
ತಾನು ನಿರ್ದೇಶಸಲಿರುವ ವೆಬ್ ಸರಣಿಯ ಚಿತ್ರೀಕರಣ ಡಿಸೆಂಬರ್ನಲ್ಲಿ ಪ್ರಾರಂಭ ಆಗುತ್ತದೆ ಎಂದಿದ್ದ ರೋಹಿತ್ ಆರ್ಯ, ಅದಕ್ಕಾಗಿ ಕೆಲವು ಪೋಷಕರ ಆಡಿಷನ್ ಸಹ ಪಡೆದಿದ್ದ. ಆರ್ಎ ಸ್ಟುಡಿಯೋನಲ್ಲಿ ಮಕ್ಕಳಿಗೆ ನಟನೆಯ ತರಬೇತಿ ನೀಡುವುದಾಗಿ ತಿಳಿಸಿದ್ದ. ಅಲ್ಲದೆ ಈ ಘಟನೆ ನಡೆಯುವ ಮುಂಚೆ ಹಿರಿಯ ನಟರಾದ ಗಿರೀಶ್ ಓಕ್ ಮತ್ತು ಊರ್ಮಿಳಾ ಕೊತಾರೆ ಇನ್ನೂ ಕೆಲವರು ಬಂದು ಮಕ್ಕಳನ್ನು ಭೇಟಿ ಆಗಿದ್ದರು ಕೆಲ ಪಾಠಗಳನ್ನೂ ಸಹ ಮಾಡಿದ್ದರು. ಇವರನ್ನೆಲ್ಲ ಸ್ವತಃ ರೋಹಿತ್ ಆರ್ಯನೇ ಕರೆಸಿದ್ದ.
ಇದನ್ನೂ ಓದಿ:ಆಟೋ ಓಡಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾಯ್ತ?
ಇದೆಲ್ಲ ನಡೆಯುತ್ತಿರುವಾಗಲೇ ರೋಹಿತ್ ಆರ್ಯ, ಅಪಹರಣಕ್ಕೂ ತಯಾರಿ ನಡೆಸಿದ್ದ ಸ್ಟುಡಿಯೋದ ಬಾಗಿಲು ಮತ್ತು ಕಿಟಿಕಿಗಳ ಬಳಿ ಸೆನ್ಸಾರ್ ಉಪಕರಣಗಳನ್ನು ಇರಿಸಿದ್ದ. ಸ್ಟುಡಿಯೋದ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಿದ್ದ. ಸ್ಟುಡಿಯೋ ಅನ್ನು ಸ್ಪೋಟಿಸಲೆಂದು ಕೆಲ ರಾಸಾಯನಿಕಗಳನ್ನು ತಂದಿದ್ದ. ಜೊತೆಗೆ ಒಂದು ಏರ್ಗನ್ ಅನ್ನು ಸಹ ಸ್ಟುಡಿಯೋಕ್ಕೆ ತಂದಿದ್ದ.
ಮಕ್ಕಳನ್ನೆಲ್ಲ ಒಂದು ವಿಶಾಲ ಕೋಣೆಯಲ್ಲಿ ಕೂಡಿಹಾಕಿ ತಾನು ಪಕ್ಕದ ಕೋಣೆಗೆ ಹೋಗಿ ಮೊದಲ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಹಂಚಿಕೊಂಡಿದ್ದ. ಅದಾದ ಬಳಿಕ ಪೊಲೀಸರು ರೋಹಿತ್ಗೆ ಕರೆ ಮಾಡಿದಾಗಲೂ ಸುಮಾರು ಎರಡು ಗಂಟೆಗಳ ಕಾಲ ಅವರೊಟ್ಟಿಗೆ ಮಾತನಾಡಿದ. ಆದರೆ ಪೊಲೀಸರ ಯಾವುದೇ ಮನವಿಗೂ ಆತ ಬಗ್ಗಲಿಲ್ಲ. ಅನಾರೋಗ್ಯದಿಂದ ಇರುವ ಒಬ್ಬ ಯುವತಿಯನ್ನು ಬಿಡು ಎಂದರೆ ಅದನ್ನೂ ಮಾಡಿರಲಿಲ್ಲ. ಮಾತ್ರವಲ್ಲದೆ, ತನಗೆ ಪೆಟ್ರೋಲ್ ಬೇಕೆಂದು ಬೇಡಿಕೆಯನ್ನು ಪೊಲೀಸರ ಬಳಿಯೇ ಇರಿಸಿದ್ದ.
ಇತ್ತ ಪೊಲೀಸರು ಆತನೊಟ್ಟಿಗೆ ಮಾತನಾಡುತ್ತಿರುವಾಗಲೇ ಹಿಂದಿನ ಬಾಗಿಲಿನಿಂದ ಇಬ್ಬರು ಪೊಲೀಸ್ ಅಧಿಕಾರಿಗಳು, ಇಬ್ಬರು ಅಗ್ನಿ ಶಾಮಕ ದಳದವರು ಒಳಗೆ ಹೋದರು. ಬಾತ್ರೂಂ ಮೂಲಕ ಸ್ಟುಡಿಯೋದ ಒಳಗೆ ನುಗ್ಗಿದಾಗಲೇ ಪೊಲೀಸರಿಗೆ ಗೊತ್ತಾಗಿದ್ದು ರೋಹಿತ್ ಬಳಿ ಬಂದೂಕು ಇದೆಯೆಂದು. ಅಲ್ಲಿಯವರೆಗೆ ತನ್ನ ಬಳಿ ಯಾವುದೇ ಶಸ್ತ್ರಾ ಇಲ್ಲವೆಂದೇ ರೋಹಿತ್ ಹೇಳಿದ್ದನಂತೆ. ಒಳಗೆ ಹೋದ ಪೊಲೀಸರು ಸಹ ರೋಹಿತ್ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದರು. ಆದರೆ ರೋಹಿತ್ ಗಾಬರಿಯಿಂದ ಏರ್ಗನ್ನಿಂದ ಫೈರ್ ಮಾಡಿದ. ಪ್ರತಿಯಾಗಿ ಅಮೋಲ್ ವಾಘ್ಮೋರೆ ಎಂಬ ಪೊಲೀಸ್ ಅಧಿಕಾರಿ ಫೈರ್ ಮಾಡಿದರು. ಗುಂಡು ತಗುಲಿದ ರೋಹಿತ್ ಕೆಳಗೆ ಬಿದ್ದ, ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆತ ಮರಣ ಹೊಂದಿದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




