ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ಹಿರಿಯ ಬರಹಗಾರ ಸಲೀಮ್ ಖಾನ್ ಅವರು ಅನಾರೋಗ್ಯದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 90 ವರ್ಷದ ಸಲೀಮ್ ಖಾನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಲ್ಮಾನ್ ಖಾನ್ ತಕ್ಷಣ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸಲೀಮ್ ಖಾನ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದು, ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

ಏಕಾಏಕಿ ಆಸ್ಪತ್ರೆಗೆ ದಾಖಲಾದ ಸಲೀಮ್ ಖಾನ್; ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್
ಸಲಿಮ್ ಖಾನ್-ಸಲ್ಮಾನ್

Updated on: Feb 17, 2026 | 3:03 PM

ಹಿರಿಯ ಬರಹಗಾರ ಹಾಗೂ ನಟ ಸಲ್ಮಾನ್ ಖಾನ್ (SalmanKhan) ತಂದೆ ಸಲೀಮ್ ಖಾನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಏನಾಗಿದೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಭದ್ರತಾ ಸಿಬ್ಬಂದಿ ಜೊತೆ ಅವರು ಮುಂಜಾನೆಯೇ ಆಸ್ಪತ್ರೆ ತಲುಪಿಸಿದ್ದಾರೆ. ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

ಸಲೀಮ್ ಖಾನ್ ಅವರನ್ನು ಇಂದು (ಫೆಬ್ರವರಿ 17) ಮುಂಜಾನೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿ ಆಗಿದೆ. ಅವರನ್ನು ಮನೆಯಿಂದ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆಯಂತೆ. ಸಲೀಮ್ ಖಾನ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಸಾಕಷ್ಟು ಆತಂಕ ಹೊರಹಾಕಿದ್ದಾರೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸದ್ಯ ಅವರನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ.

ಸಲ್ಮಾನ್ ಅವರಿಗೆ ಸಲೀಮ್ ಖಾನ್ ಅವರನ್ನು ಕಂಡರೆ ಅಪಾರ ಗೌರವ ಹಾಗೂ ಪ್ರೀತಿ. ಅವರ ಪ್ರತಿ ಹಂತದಲ್ಲೂ ಸಲೀಮ್ ಖಾನ್ ಬೆಂಬಲವಾಗಿ ನಿಂತಿದ್ದರು. ಈ ಕಾರಣದಿಂದಲೇ ಈ ಹಂತಕ್ಕೆ ತಾವು ಬೆಳೆದು ನಿಂತಿದ್ದು ಎಂಬ ನಂಬಿಕೆ ಸಲ್ಮಾನ್ ಖಾನ್ ಅವರದ್ದು.

ಸಲೀಮ್ ಖಾನ್ ಅವರು ಜಾವೇದ್ ಜೊತೆ ಸೇರಿ ಅದ್ಭುತ ಕಥೆಗಳನ್ನು ಬರೆಯುತ್ತಿದ್ದರು. 70ರ ದಶಕದಲ್ಲಿ ಈ ಜೋಡಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ‘ಶೋಲೆ’ ಈ ಜೋಡಿ ಕೊಟ್ಟ ಅದ್ಭುತ ಸಿನಿಮಾಗಳಲ್ಲಿ ಒಂದು. ‘ದೀವಾರ್’, ‘ಝಂಜೀರ್’, ‘ಡಾನ್’ ಸಿನಿಮಾಗಳಿಗೂ ಇವರು ಕಥೆ ಬರೆದಿದ್ದಾರೆ. ಸಲೀಮ್ ಖಾನ್ ಅವರಿಗೆ ಕನ್ನಡದ ನಂಟು ಕೂಡ ಇದೆ. 1976ರಲ್ಲಿ ಬಂದ ‘ಪ್ರೇಮದ ಕಾಣಿಕೆ’ ಹಾಗೂ ‘ರಾಜ ನನ್ನ ರಾಜ’ ಸಿನಿಮಾಗಳಿಗೆ ಸಲೀಮ್ ಹಾಗೂ ಜಾವೇದ್ ಅವರೇ ಕಥೆ ನೀಡಿದರು. ಈ ಎರಡೂ ಸಿನಿಮಾಗಳು ಹಿಟ್ ಆದವು.

ಇದನ್ನೂ ಓದಿ: ಸಲ್ಮಾನ್ ಖಾನ್​​ಗೆ ಇಷ್ಟ ಆಯ್ತು ಸಾನ್ವಿ ಸುದೀಪ್ ಕಂಠ; ಮೆಚ್ಚುಗೆ ಸೂಚಿಸಿದ ನಟ

ಸಲೀಮ್ ಖಾನ್ ಅವರಿಗೆ ಈಗ 90ನೇ ವರ್ಷ. ಈ ವಯಸ್ಸಿನಲ್ಲಿ ಅನಾರೋಗ್ಯ ಕಾಡಿರುವುದರಿಂದ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಈ ಬಗ್ಗೆ ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us