
ಸಲ್ಮಾನ್ ಖಾನ್ ಅವರು (Salman Khan) ಬಾಲಿವುಡ್ನ ಬೇಡಿಕೆಯ ನಟ. ಅವರ ಸಿನಿಮಾಗಳು ಕೋಟಿಕೋಟಿ ಬಿಸ್ನೆಸ್ ಮಾಡುತ್ತವೆ. ಇತ್ತೀಚೆಗೆ ಅವರ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ಆದಾಗ್ಯೂ, ಅವರ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಅವರ ಕಾಲ್ಶೀಟ್ ಪಡೆಯೋಕೆ ಕಾದು ನಿಂತಿದ್ದಾರೆ. ಸ್ಟಾರ್ ಹೀರೊ ಎಂದರೆ ಅವರ ಕುಟುಂಬದವರ ಬಗ್ಗೆಯೂ ಎಲ್ಲರ ದೃಷ್ಟಿ ಇರುತ್ತದೆ. ಈಗ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ಗೆ (Salim Khan) ಕೊಲೆ ಬೆದರಿಕೆ ಎದುರಾಗಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಮುಂಬೈನ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ಬಳಿ ಸಲೀಮ್ ನಿತ್ಯ ವಾಯುವಿಹಾರಕ್ಕೆ ತೆರಳುತ್ತಾರೆ. ಅವರು ವಿಶ್ರಾಂತಿ ಪಡೆಯುವ ಪ್ರದೇಶದಲ್ಲಿ ಪತ್ರ ಒಂದು ಸಿಕ್ಕಿದೆ. ಇದು ಸಲ್ಮಾನ್ ಖಾನ್ ಹಾಗೂ ತಂದೆ ಸಲೀಮ್ ಖಾನ್ಗೆ ಬರೆಯಲಾದ ಪತ್ರ. ‘ಮೂಸೆವಾಲ ರೀತಿಯೇ ನಿಮ್ಮ ಪ್ರಾಣ ಹೋಗಲಿದೆ’ ಎಂದು ಪತ್ರದಲ್ಲಿ ಬೆದರಿಕೆವೊಡ್ಡಲಾಗಿದೆ. ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಲೀಮ್ ಖಾನ್ಗೆ ಈ ರೀತಿ ಪತ್ರ ಬಂದಿರುವುದು ಆತಂಕ ಮೂಡಿಸಿದೆ.
ಈ ಪತ್ರ ಸಲೀಮ್ ಖಾನ್ ಭದ್ರತಾ ಸಿಬ್ಬಂದಿ ಅವರ ಗಮನಕ್ಕೆ ಬಂದಿದೆ. ಅವರು ಇದನ್ನು ತೆಗೆದು ಓದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐರ್ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಬರೆದವರು ಯಾರು, ಯಾವ ಉದ್ದೇಶದಿಂದ ಈ ರೀತಿ ಬೆದರಿಕೆ ಒಡ್ಡಲಾಗಿದೆ ಎಂಬುದು ತನಿಖೆ ನಂತರ ತಿಳಿದು ಬರಬೇಕಿದೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
ಸಲೀಮ್ ಖಾನ್ ಬಾಲಿವುಡ್ನಲ್ಲಿ ನಟ, ನಿರ್ಮಾಪಕ, ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ಗೆ ಬಾಲಿವುಡ್ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ನೆಲೆ ಸಿಗಲು ಸಲೀಮ್ ಅವರ ಪಾತ್ರವೂ ದೊಡ್ಡದಿದೆ ಎಂದರೆ ತಪ್ಪಾಗಲಾರದು. ಈಗ ಸಲೀಮ್ಗೆ ಕೊಲೆ ಬೆದರಿಕೆ ಬಂದಿರುವುದು ಸಲ್ಲು ಫ್ಯಾನ್ಸ್ಗೆ ಆತಂಕ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 pm, Sun, 5 June 22