ಸಲ್ಮಾನ್ ಖಾನ್ ತಂದೆಗೇ ಇಷ್ಟವಾಗಿಲ್ಲ ರಾಧೆ; ಸಿನಿಮಾ ನೋಡಿದ ಸಲೀಮ್ ಖಾನ್ ಹೇಳಿದ್ದೇನು?
ಹಿಂದಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ತಂದೆ ಹಾಗೂ ಚಿತ್ರಕಥೆ ಬರಹಗಾರ ಸಲೀಮ್ ಖಾನ್ ಮಾತನಾಡಿದ್ದಾರೆ. ಈ ವೇಳೆ ಅವರು ರಾಧೆ ಬಗ್ಗ ಮಾತನಾಡಿದ್ದಾರೆ.
‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದ ವಿಮರ್ಶೆ ಧನಾತ್ಮಕವಾಗಿರಲಿಲ್ಲ. ಈ ಚಿತ್ರವನ್ನು ಹೊಗಳಿದ್ದಕ್ಕಿಂತ ತೆಗಳಿದವರೇ ಹೆಚ್ಚು. ಈಗ ರಾಧೆ ಚಿತ್ರವನ್ನು ಸಲ್ಮಾನ್ ಖಾನ್ ತಂದೆ ಹಾಗೂ ಚಿತ್ರಕಥೆ ಬರಹಗಾರ ಸಲೀಮ್ ಖಾನ್ ಅವರೇ ತೆಗಳಿದ್ದಾರೆ. ರಾಧೆ ಸಿನಿಮಾದಿಂದ ಸಾಕಷ್ಟು ನಿರಾಸೆ ಉಂಟಾಗಿದೆ ಎಂದಿದ್ದಾರೆ. ಇದು ಸಲ್ಮಾನ್ ಖಾನ್ಗೆ ತೀವ್ರ ಮುಖಭಂಗ ಉಂಟು ಮಾಡಿದೆ.
ಹಿಂದಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲೀಮ್ ಖಾನ್ ಮಾತನಾಡಿದ್ದಾರೆ. ದಬಾಂಗ್-3 ಸಾಧಾರಾಣವಾಗಿತ್ತು. ಭಜರಂಗಿ ಭಾಯಿಜಾನ್ ಸಿನಿಮಾ ತುಂಬಾ ಉತ್ತಮವಾಗಿತ್ತು. ಆದರೆ, ರಾಧೆ ಸಿನಿಮಾ ನನಗೆ ಇಷ್ಟವಾಗಿಲ್ಲ ಎಂದು ಸಲೀಮ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿಯಲ್ಲಿ ಉತ್ತಮ ಕಥೆ ಬರಹಗಾರರಿಲ್ಲ. ಕಥೆ ಬರೆಯುವವರು ಹಿಂದಿ ಅಥವಾ ಉರ್ದು ಸಾಹಿತ್ಯವನ್ನು ಓದಿಲ್ಲ. ಹೊರಗಿನ ಯಾವುದೋ ಸಿನಿಮಾ ನೋಡುತ್ತಾರೆ. ಅದನ್ನು ಇಲ್ಲಿನ ಶೈಲಿಗೆ ತಕ್ಕಂತೆ ಬದಲಾಯಿಸಲು ಪ್ರಯತ್ನಿಸುತ್ತಾರೆ ಎಂದು ಹೇಳುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸತನ ಇಲ್ಲ ಎಂಬುದನ್ನು ಸಲೀಮ್ ಖಾನ್ ಒತ್ತಿ ಹೇಳಿದ್ದಾರೆ.
ಕಮರ್ಷಿಯಲ್ ಸಿನಿಮಾಗಳು ಅದ್ದರದ್ದೇ ಆದ ಜವಾಬ್ದಾರಿ ಹೊಂದಿದೆ. ಕಮರ್ಷಿಯಲ್ ಚಿತ್ರದಿಂದ ಪ್ರತಿಯೊಬ್ಬನಿಗೂ ಹಣ ದೊರಕಬೇಕು. ಕಲಾವಿದರು, ನಿರ್ಮಾಪಕರು, ಹಂಚಿಕೆದಾರರು ಸೇರಿ ಎಲ್ಲರಿಗೂ ಹಣ ಸಿಗಬೇಕು. ರಾಧೆ ಸಿನಿಮಾ ಹಣ ಮಾಡಿದೆ. ಆದರೆ, ಸಿನಿಮಾ ಅಷ್ಟೊಂದು ಉತ್ತಮವಾಗಿ ಮೂಡಿ ಬಂದಿಲ್ಲ ಎಂದಿದ್ದಾರೆ.
ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿತ್ತು. ಮೊದಲ ದಿನ ಸಿನಿಮಾ ನೋಡೋಕೆ ಸಿನಿಪ್ರಿಯರು ಮುಗಿ ಬಿದ್ದಿದ್ದರು. ಇಷ್ಟೆಲ್ಲ ಅಬ್ಬರದ ನಡುವೆಯೂ ವಿಮರ್ಶೆ ವಿಚಾರದಲ್ಲಿ ರಾಧೆ ಸೋತಿತ್ತು. ರಾಧೆ ಚಿತ್ರವನ್ನು ಬಾಲಿವುಡ್ ನಟ ಕಮಾಲ್ ಖಾನ್ ಕಳಪೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿ ಕಮಾಲ್ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
‘ಒಂದೊಮ್ಮೆ ನಿರ್ಮಾಪಕರು ಹಾಗೂ ನಟರು ತಮ್ಮ ಸಿನಿಮಾಗಳ ವಿಮರ್ಶೆ ಮಾಡಬೇಡಿ ಎಂದು ಹೇಳಿದರೆ ಅಂಥ ಸಿನಿಮಾವನ್ನು ನಾನೆಂದೂ ವಿಮರ್ಶೆ ಮಾಡಿಲ್ಲ. ಈಗ ಸಲ್ಮಾನ್ ಖಾನ್ ನನ್ನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ನಾನು ಅವರ ಸಿನಿಮಾಗಳನ್ನು ಇನ್ಮುಂದೆ ವಿಮರ್ಶೆ ಮಾಡುವುದಿಲ್ಲ’ ಎಂದು ಕಮಾಲ್ ಶಪಥ ಮಾಡಿದ್ದರು.
ಇದನ್ನೂ ಓದಿ: ರಾಧೆ ಸಿನಿಮಾ ಕಳಪೆ ಎಂದ ನಟನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್ ಖಾನ್