
ಇಬ್ಬರು ಅಪರಿಚಿತ ವ್ಯಕ್ತಿಗಳು ಸಲ್ಮಾನ್ ಖಾನ್ (Salman Khan) ಮನೆಯ ಎದುರು ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ (ಏಪ್ರಿಲ್ 14) ಮುಂಜಾನೆ ಈ ಘಟನೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿ ಇರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಬೆಳಗ್ಗೆ 5 ಗಂಟೆ ಸುಮಾರಿಗೆ ಗುಂಡಿನ ಸದ್ದು (Gunshot) ಕೇಳಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಕಿಡಿಗೇಡಿಗಳು ಮೂರು ಬಾರಿ ಗುಂಡು ಹಾರಿಸಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ಮನೆಗೆ (Salman Khan House) ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ತಲುಪಿದ್ದಾರೆ. ಸ್ಥಳ ಪರಿಶೀಲನೆಯ ಕಾರ್ಯ ಭರದಿಂದ ಆಗುತ್ತಿದೆ. ಗುಂಡಿನ ದಾಳಿ ನಡೆಸಿದವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.
ಈ ಸುದ್ದಿ ಕೇಳಿ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಈಗಾಗಲೇ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಲಾರೆಯ್ಸ್ ಬಿಷ್ಣೋಯ್ ಬೆದರಿಕೆ ಹಾಕಿರುವುದು ಗೊತ್ತೇ ಇದೆ. ಆ ಬಳಿಕ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಗುಂಡಿನ ದಾಳಿ ಬಳಿಕ ಇನ್ನಷ್ಟು ಭಯದ ವಾತಾವರಣ ನಿರ್ಮಾಣ ಆಗಿದೆ. ಇದು ಯಾರ ಕೃತ್ಯ ಎಂಬುದು ಇನ್ನೂ ತಿಳಿದುಬಂದಿಲ್ಲ.
ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಸಲ್ಮಾನ್ ಖಾನ್ ಅವರ ಮನೆಯ ಎದುರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಸಲ್ಲು ಮನೆಯ ಸುತ್ತಮುತ್ತಲಿನ ಇಂಚಿಂಚೂ ಜಾಗವನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಕೂಡ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಈ ಘಟನೆ ಬಗ್ಗೆ ಸಲ್ಮಾನ್ ಖಾನ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಇದನ್ನೂ ಓದಿ: ಈದ್ ದಿನವೇ ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ಮೇಲೆ ಲಾಠಿಚಾರ್ಜ್
ಸಲ್ಮಾನ್ ಖಾನ್ ಅವರ ಮೇಲೆ ಈ ಮೊದಲು ಕೂಡ ಹತ್ಯೆ ಪ್ರಯತ್ನ ನಡೆದಿತ್ತು. ಆದರೆ ಕಿಡಿಗೇಡಿಗಳ ಪ್ಲ್ಯಾನ್ ವಿಫಲವಾಗಿತ್ತು. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರು ಸಂಭ್ರಮದಿಂದ ಈದ್ ಹಬ್ಬ ಆಚರಿಸಿದರು. ಬೆಳಗ್ಗೆಯಿಂದ ರಾತ್ರಿ ತನಕ ಅವರ ಮನೆ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಸಂಜೆ ವೇಳೆಗೆ ಸಲ್ಮಾನ್ ಖಾನ್ ಅವರು ಮನೆಯ ಬಾಲ್ಕನಿಗೆ ಬಂದು ಎಲ್ಲರತ್ತ ಕೈ ಬೀಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.