ಸಲ್ಮಾನ್ ಖಾನ್ (Salman Khan) ನಟನೆಯ ಯಾವುದೇ ಸಿನಿಮಾಗಳು ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ‘ರಾಧೆ’ (Radhe Movie) ಸೇರಿದಂತೆ ಅನೇಕ ಸಿನಿಮಾಗಳು ಸೋತು ಸುಣ್ಣವಾಗಿದೆ. ಈ ಕಾರಣದಿಂದಲೇ ಅವರು ಒಂದು ದೊಡ್ಡ ಬ್ಲಾಕ್ಬಸ್ಟರ್ ಹಿಟ್ ನೀಡುವ ಕನಸು ಕಾಣುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ಸಿನಿಮಾ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸೋತಿದೆ. ಈಗ ಅವರು ಆಯ್ಕೆ ಮಾಡಿಕೊಂಡಿರುವುದು ‘ಟೈಗರ್ 3’ ಸಿನಿಮಾ ಅನ್ನು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಧಮಾಕಾ ಮಾಡುವ ಸಾಧ್ಯತೆ ಇದೆ. ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂಬುದಕ್ಕೆ ಇಲ್ಲಿದೆ ಕಾರಣ.
ಸಲ್ಮಾನ್ ಖಾನ್ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು ‘ಟೈಗರ್ ಜಿಂದಾ ಹೈ’ ಚಿತ್ರದ ಮೂಲಕ. ಈ ಸಿನಿಮಾ ರಿಲೀಸ್ ಆಗಿದ್ದು 2017ರಲ್ಲಿ. ನಂತರ ರಿಲೀಸ್ ಆದ ‘ರೇಸ್ 3’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದರೂ ವಿಮರ್ಶಕರು ಚಿತ್ರವನ್ನು ಟೀಕಿಸಿದರು. ಇದಾದ ಬಳಿಕ ಬಿಡುಗಡೆ ಆದ ‘ದಬಾಂಗ್ 3’, ‘ರಾಧೆ’ ಚಿತ್ರಗಳು ಸೋತು ಸುಣ್ಣವಾಗಿವೆ. ಹೀಗಾಗಿ ಅವರಿಗೆ ‘ಟೈಗರ್ 3’ ಸಿನಿಮಾ ತುಂಬಾನೇ ಮುಖ್ಯ ಎನಿಸಿಕೊಂಡಿದೆ.
ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರು ಒಟ್ಟಾಗಿ ನಟಿಸಿದ ‘ಟೈಗರ್ ಜಿಂದಾ ಹೈ’ ಹಾಗೂ ‘ಏಕ್ ಥಾ ಟೈಗರ್’ ಚಿತ್ರಗಳು ಯಶಸ್ಸು ಕಂಡಿವೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಕೆಮಿಸ್ಟ್ರಿ ಕೆಲಸ ಮಾಡಿದೆ. ಇದೊಂದು ಸಕ್ಸಸ್ಫುಲ್ ಫ್ರಾಂಚೈಸ್ ಎನಿಸಿಕೊಂಡಿದೆ. ಇವರ ಕೆಮಿಸ್ಟ್ರಿ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಾರಿ ಸಿನಿಮಾದ ಕಥೆ ಪಾಕಿಸ್ತಾನದಲ್ಲಿ ನಡೆಯಲಿದೆ ಎನ್ನಲಾಗಿದೆ.
ಈ ಮೊದಲು ರಿಲೀಸ್ ಆದ ಸಿನಿಮಾಗಳಿಗಿಂತ ‘ಟೈಗರ್ 3’ ಸಿನಿಮಾ ಬಜೆಟ್ ಹೆಚ್ಚಿದೆ. ಮೊದಲಿಗೆ ಹೋಲಿಕೆ ಮಾಡಿದರೆ ವಿಎಫ್ಎಕ್ಸ್ ಗುಣಮಟ್ಟ ಹೆಚ್ಚಿಸಲಾಗಿದೆ. ಹಲವು ಹೊಸ ಶೂಟಿಂಗ್ ಲೊಕೇಷನ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರೇಕ್ಷಕರನ್ನು ಸೆಳೆಯಲು ಈ ಅಂಶಗಳು ಸಹಕಾರಿ ಆಗಲಿವೆ.
‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಸಿನಿಮಾಗಳು ಸಖತ್ ಅದ್ದೂರಿ ಆಗಿರುತ್ತವೆ. ಅವರು ಸಿನಿಮಾ ಅದ್ದೂರಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಈಗಾಗಲೇ ‘ಟೈಗರ್ 3’ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಸಲ್ಮಾನ್ ಖಾನ್ ದೇಶದ ವಿರುದ್ಧವೇ ತಿರುಗಿ ಬೀಳುತ್ತಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಈ ಮೊದಲು ರಿಲೀಸ್ ಆದ ‘ಟೈಗರ್’ ಸರಣಿಯಲ್ಲಿ ಸಾಕಷ್ಟು ಟ್ವಿಸ್ಟ್ಗಳನ್ನು ಇಡಲಾಗಿತ್ತು. ಅದು ‘ಟೈಗರ್ 3’ ಚಿತ್ರದಲ್ಲೂ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಆ್ಯಕ್ಷನ್ ಚಿತ್ರಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದೆ. ‘ಪಠಾಣ್’, ‘ಜವಾನ್’, ‘ಗದರ್ 2’ ಚಿತ್ರಗಳು ಆ್ಯಕ್ಷನ್ ಶೈಲಿಯಲ್ಲಿದ್ದವು. ಈ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದು ಬೀಗಿವೆ. ಅದರಲ್ಲೂ ಪಾಕಿಸ್ತಾನದ ವಿಚಾರ ಇಟ್ಟುಕೊಂಡಿದ್ದರಿಂದಲೇ ‘ಗದರ್ 2’ ಚಿತ್ರಕ್ಕೆ ಸಹಕಾರಿ ಆಗಿದೆ. ಈಗ ‘ಟೈಗರ್ 3’ ಸಿನಿಮಾ ಕೂಡ ಆ್ಯಕ್ಷನ್ ಶೈಲಿಯಲ್ಲಿರುವುದರಿಂದ ಭರ್ಜರಿ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಬಿಗ್ ಬಾಸ್’ನಲ್ಲಿ ನಿರೂಪಕ ಸಲ್ಮಾನ್ ಖಾನ್ ಹಾಗೂ ಸ್ಪರ್ಧಿಗಳು ಪಡೆದ ಸಂಭಾವನೆ ಎಷ್ಟು ಕೋಟಿ ರೂಪಾಯಿ?
ಶಾರುಖ್ ಖಾನ್ ಅವರು ‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಕಾರಣದಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಮೊದಲು ಸಲ್ಮಾನ್ ಖಾನ್ ಅವರು ‘ಪಠಾಣ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಡಿದ್ದರು. ಹೃತಿಕ್ ಕೂಡ ‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ