
ಕಮಿಡಿಯನ್ ಸಮಯ್ ರೈನಾ, ಕಳೆದ ವರ್ಷ ‘ಇಂಡಿಯಾ ಗಾಟ್ ಲೇಟೆಂಟ್’ ಕಾರಣಕ್ಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸರಿಂದ ಸತತ ನೊಟೀಸ್, ಬೆದರಿಕೆ, ಸಮಯ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೆಲವೆಡೆ ಪ್ರತಿಭಟನೆ ಸಹ ನಡೆದಿತ್ತು. ಆದರೆ ಈಗ ಅದೇ ಸಮಯ್ ರೈನಾ ವಿಶ್ವದಾಖಲೆ ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ ವಿಶ್ವದ ಯಾರೂ ಮಾಡದಿರುವ ದಾಖಲೆ ಸಮಯ್ ರೈನಾ ಹೆಸರಿಗೆ ಬಂದಿದೆ.
ಕಳೆದ ವರ್ಷ ವಿವಾದಗಳ ಕಾರಣದಿಂದ ನಿಂತು ಹೋಗಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋನ ಎರಡನೇ ಸೀಸನ್ ಅನ್ನು ಆರಂಭಿಸಿದ ಸಮಯ್ ರೈನಾ, ಇದೀಗ ವಿಶ್ವದಲ್ಲೇ ಅತಿ ಹೆಚ್ಚು ಯೂಟ್ಯೂಬ್ ಮೆಂಬರ್ಗಳನ್ನು ಹೊಂದಿರುವ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಸಮಯ್ ರೈನಾ ಅವರ ಚಾನೆಲ್ಗೆ ಹತ್ತು ಲಕ್ಷಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ದೊಡ್ಡ ಸದಸ್ಯರ ಬಳಕ ವಿಶ್ವದ ಇನ್ಯಾವುದೇ ಯೂಟ್ಯೂಬರ್ಗಳಿಗೆ ಇಲ್ಲ.
‘ಗ್ರ್ಯಾಂಡ್‌ಮಾಸ್ಟರ್‌ಗಳೊಂದಿಗೆ ಹಾಸ್ಯಭರಿತ ಮಾತುಕತೆಯಿಂದ ಹಿಡಿದು ‘ಇಂಡಿಯಾಸ್ ಗಾಟ್ ಲೇಟೆಂಟ್’ ಎಂಬ ಸಂಚಲನ ಸೃಷ್ಟಿಸುವವರೆಗೆ, ಸಮಯ್ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಲಕ್ಷಾಂತರ ಜನರ ಅತ್ಯುತ್ತಮ ವರ್ಚುವಲ್ ಹ್ಯಾಂಗ್‌ಔಟ್ ತಾಣವನ್ನಾಗಿ ಪರಿವರ್ತಿಸಿದ್ದಾರೆ’ ಎಂದು ಖುದ್ದು ಯೂಟ್ಯೂಬ್ ಹೇಳಿದೆ.
ಇದನ್ನೂ ಓದಿ:ಸಮಯ್ ರೈನಾಗೆ ಸನ್ಮಾನ ಮಾಡಿದ್ದನ್ನು ಖಂಡಿಸಿದ ಮತ್ತೋರ್ವ ಕಾಮಿಡಿಯನ್
ಮುಂದುವರಿದು, ‘ಸಮಯ್ ಅವರ 10 ಲಕ್ಷ ಚಾನೆಲ್ ಸದಸ್ಯರ ಮೈಲಿಗಲ್ಲು ಪ್ರಸ್ತುತ ಭಾರತದಾದ್ಯಂತ ಕಂಟೆಂಟ್ಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ. ಪ್ರೇಕ್ಷಕರು ಇನ್ನು ಮುಂದೆ ತಮಗೆ ಇಷ್ಟವಾದ ಕ್ರಿಯೇಟರ್‌ಗಳ ಪರವಾಗಿ ವೈಯಕ್ತಿಕ ಮತ್ತು ಅರ್ಥಪೂರ್ಣ ರೀತಿಯಲ್ಲಿ ಬೆಂಬಲ ನೀಡಲು ಯತ್ನಿಸುತ್ತಿದ್ದಾರೆ. ಜೂನ್ 2026 ಒಂದರಲ್ಲೇ, ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಯೂಟ್ಯೂಬ್‌ನಲ್ಲಿ ಕನಿಷ್ಠ ಒಂದು ಚಾನೆಲ್ ಸದಸ್ಯತ್ವವನ್ನು ಖರೀದಿಸಿದ್ದಾರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೆಂಬರ್ ಆಗುವ ಪ್ರಕ್ರಿಯೆ 25% ಹೆಚ್ಚಿದೆ’ ಎಂದಿದೆ ಯೂಟ್ಯೂಬ್.
ಸಮಯ್ ಪ್ರಸ್ತುತ ಯೂಟ್ಯೂಬ್‌ನಲ್ಲಿ 1.24 ಕೋಟಿ ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದಾರೆ. ಜೊತೆಗೆ 10 ಲಕ್ಷಕ್ಕೂ ಹೆಚ್ಚು ಮೆಂಬರ್ಸ್ಗಳನ್ನು ಹೊಂದಿದ್ದಾರೆ. ಮೆಂಬರ್ಸ್ಗಳೆಂದರೆ ಹಣ ಕೊಟ್ಟು ಸಮಯ್ ರೈನಾ ಅವರ ಯೂಟ್ಯೂಬ್ ಚಾನೆಲ್ಲಿಗೆ ಮೆಂಬರ್ ಆಗಿರುತ್ತಾರೆ. ಇವರಿಗಾಗಿಯೇ ಸಮಯ್ ರೈನಾ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ತಿಂಗಳಿಗೆ 59 ರೂಪಾಯಿ, 599 ರೂಪಾಯಿ ಮತ್ತು 1999 ರೂಪಾಯಿ ಹಣ ನೀಡಿ ಸಮಯ್ ರೈನಾ ಅವರ ಚಾನೆಲ್ಲಿನ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಕೆಲವು ವಿಡಿಯೋಗಳನ್ನು ಸಮಯ್, ಮೆಂಬರ್ಸ್ಗಾಗಿ ಮಾತ್ರವೇ ಹಾಕುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ