ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಈಗತಾನೇ ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಅವರು ನಟಿಸಿದ ಸಿನಿಮಾಗಳೆಲ್ಲವೂ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಈಗ ಅವರ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ ಒಂದು ಮಟ್ಟದ ಕಲೆಕ್ಷನ್ (Box Office Collection) ಮಾಡಿದೆ. 10 ದಿನಗಳ ಪ್ರದರ್ಶನ ಕಂಡ ಈ ಸಿನಿಮಾ ಒಟ್ಟು 53 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಸಿನಿಮಾಗಳ ಬಜೆಟ್ಗೆ ಹೋಲಿಸಿದರೆ ಇದು ಮೀಡಿಯಂ ಕಲೆಕ್ಷನ್. ಹಾಗಿದ್ದರೂ ಕೂಡ ಚಿತ್ರತಂಡ ಈ ಗೆಲುವನ್ನು ಸಂಭ್ರಮಿಸುತ್ತಿದೆ. ಈ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಅವರಿಗೆ ಜೋಡಿಯಾಗಿ ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದಾರೆ. ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಗೆಲ್ಲುವುದಿಲ್ಲ ಎಂದು ಕೆಲವರು ಊಹಿಸಿದ್ದರು. ಹೆಚ್ಚೆಂದರೆ ಈ ಸಿನಿಮಾ 20 ಕೋಟಿ ರೂಪಾಯಿ ಗಳಿಸಬಹುದು ಎಂದು ಹೇಳಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ. ನಿಧಾನವಾಗಿ ಈ ಸಿನಿಮಾ ಹಿಟ್ ಎನಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಬಿಡುಗಡೆಯಾಗಿ 10 ದಿನ ಕಳೆದ ಬಳಿವೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸುಮಾರು 70 ಕೋಟಿ ರೂಪಾಯಿ ತನಕವೂ ಕಲೆಕ್ಷನ್ ಮಾಡುವ ತಾಕತ್ತು ಈ ಚಿತ್ರಕ್ಕಿದೆ ಎಂದು ತರಣ್ ಆದರ್ಶ್ ಅಂದಾಜಿಸಿದ್ದಾರೆ.
#ZaraHatkeZaraBachke is a HIT… Crosses ₹ 50 cr [Day 10], has ample stamina to hit ₹ 70 cr [+/-]… Proves all estimations/calculations wrong of skeptics, who predicted ₹ 20 cr [+/-] *lifetime*… [Week 2] Fri 3.42 cr, Sat 5.76 cr, Sun 7.02 cr. Total: ₹ 53.55 cr. #India biz.… pic.twitter.com/b4UGDJo2HJ
— taran adarsh (@taran_adarsh) June 12, 2023
ಸಾರಾ ಅಲಿ ಖಾನ್ ಅವರಿಗೆ ದೇವರ ಬಗ್ಗೆ ತುಂಬ ಭಕ್ತಿ ಇದೆ. ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ ಅವರು ಅನೇಕ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಸಾರಾ ಅಲಿ ಖಾನ್ ಅವರು ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿತ್ತು. ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರಕ್ಕೆ ಯಶಸ್ಸು ಸಿಕ್ಕಿದ್ದಕ್ಕಾಗಿ ಅವರು ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರಿಗೆ ವಿಕ್ಕಿ ಕೌಶಲ್ ಕೂಡ ಸಾಥ್ ನೀಡಿದ್ದರು.
ಇದನ್ನೂ ಓದಿ: Sara Ali Khan: ಸ್ಟಾರ್ ನಟನ ಜೊತೆಗಿನ ಬ್ರೇಕಪ್ ಬಳಿಕ ಸಾರಾ ಅಲಿ ಖಾನ್ಗೆ ಶುರುವಾಯ್ತು ಕೆಟ್ಟ ಕಾಲ; ಒಪ್ಪಿಕೊಂಡ ನಟಿ
ಸಾರಾ ಅಲಿ ಖಾನ್ ಅವರು ದೇವಸ್ಥಾನಕ್ಕೆ ತೆರಳುವುದು ಒಂದು ಪ್ರಚಾರದ ಗಿಮಿಕ್ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದರು. ಸಿನಿಮಾದ ಗೆಲುವಿಗಾಗಿ ಸೆಲೆಬ್ರಿಟಿಗಳು ಇಂಥದ್ದನ್ನೆಲ್ಲ ಮಾಡುತ್ತಾರೆ ಎಂಬ ಕಮೆಂಟ್ಗಳು ಕೂಡ ಬಂದಿದ್ದವು. ಅದಕ್ಕೆಲ್ಲ ಸಾರಾ ಅಲಿ ಖಾನ್ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ‘ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಮತ್ತು ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ಬೇಸರ ಆಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಸಂಬಂಧಿಸಿದ್ದು. ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಹೋಗುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಇದನ್ನು ನಾನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಲಿ. ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುತ್ತೇನೆ’ ಎಂದು ಸಾರಾ ಅಲಿ ಖಾನ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.