ಹಿಂದಿಯ ‘ಮುನ್ನಾಭಾಯಿ’ ಸರಣಿ ಸಿನಿಮಾಗಳಲ್ಲಿ ಸರ್ಟಿಕ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ನಟ ಅರ್ಷದ್ ವಾರ್ಸಿ (Arshad Warsi) ಏಕಾಏಕಿ ಸುದ್ದಿಗೆ ಬಂದಿಗೆ ಬಂದಿದ್ದಾರೆ. ನಟ ಅರ್ಷದ್ ವಾರ್ಸಿ ಹಾಗೂ ಅವರ ಪತ್ನಿಯ ಮೇಲೆ ಷೇರು ಮಾರುಕಟ್ಟೆ ಮೇಲೆ ನಿಗಾವಹಿಸುವ ಸೆಬಿಯು (SEBI) ನಿಷೇಧ ಹೇರಿದ್ದು, ಈ ದಂಪತಿ ಭಾರತದ ಷೇರು ಮಾರುಕಟ್ಟೆಯಲ್ಲಿ ನಿಗದಿತ ಅವಧಿಯವರೆಗೆ ಷೇರು ಖರೀದಿ, ಮಾರಾಟ ಸೇರಿದಂತೆ ಯಾವುದೇ ವ್ಯವಹಾರ ಮಾಡುವಂತಿಲ್ಲ.
ಅರ್ಷದ್ ವಾರ್ಸಿ ಹಾಗೂ ಅವರ ಪತ್ನಿ ಮರಿಯಾ, ತಾವು ಲಾಭ ಮಾಡಿಕೊಳ್ಳಲೆಂದು ಎರಡು ಕಂಪೆನಿಗಳ (ಸಾಧನಾ ಬ್ರಾಡ್ಕಾಸ್ಟ್ ಲಿಮಿಟೆಡ್ ಮತ್ತು ಶಾರ್ಪ್ಲೈನ್ ಬ್ರಾಡ್ಕಾಸ್ಟ್ ಲಿಮಿಟೆಡ್) ಷೇರು ಮೌಲ್ಯವನ್ನು ತಮ್ಮ ಪ್ರಭಾವ ಬಳಸಿ ಏರಿಳಿತ ಮಾಡಿಸಿದ್ದಾರೆಂದು ಸೆಬಿ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ನಟ ಅರ್ಷದ್ ವಾರ್ಸಿ ಇದೆಲ್ಲ ಸುಳ್ಳು ಎಂದಿದ್ದಾರೆ.
ಟ್ವಿಟ್ಟರ್ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರ್ಷದ್ ವಾರ್ಸಿ, ”ಓದುವ ಎಲ್ಲ ಸುದ್ದಿಗಳನ್ನು ನಂಬಬೇಡಿ. ಪತ್ನಿ ಮಾರಿಯಾ ಮತ್ತು ನನಗೆ ಷೇರು ಮಾರುಕಟ್ಟೆ ಬಗ್ಗೆ ಜ್ಞಾನವಾಗಲಿ ಮಾಹಿತಿಯಾಗಲಿ ಇಲ್ಲ. ಹಾಗಾಗಿ ಬೇರೊಬ್ಬರ ಸಲಹೆ ಪಡೆದುಕೊಂಡು ಶಾರದಾ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆವು. ಈಗ ಇತರ ಅನೇಕರಂತೆ ನಾವು ಸಹ ಕಷ್ಟಪಟ್ಟು ಸಂಪಾದಿಸಿದ ನಮ್ಮ ಹಣವನ್ನು ಕಳೆದುಕೊಂಡಿದ್ದೇವೆ” ಎಂದಿದ್ದಾರೆ.
ಸೆಬಿಯ ಪ್ರಾಥಮಿಕ ತನಿಖೆಯಂತೆ ಅರ್ಷದ್ ವಾರ್ಸಿ ಹಾಗೂ ಅವರ ಪತ್ನಿ ಮರಿಯಾ ಮೇಲೆ ಹೆಸರಿಸಿದ ಎರಡು ಕಂಪೆನಿಗಳ ಷೇರುಗಳಲ್ಲಿ ‘ಪಂಪ್ ಆಂಡ್ ಡಂಪ್’ ಮಾಡಿದ್ದಾರೆ. ತಾವು ಮೊದಲು ದೊಡ್ಡ ಮೊತ್ತ ಹೂಡಿಕೆ ಮಾಡಿ, ಯೂಟ್ಯೂಬ್ ವಿಡಿಯೋಗಳನ್ನು ಬಳಸಿ ಆ ಕಳಪೆ ಕಂಪೆನಿಯ ಷೇರುಗಳ ಬಗ್ಗೆ ಪ್ರಚಾರ ಮಾಡಿ ಹೆಚ್ಚು ಮಂದಿ ಬಂಡವಾಳ ತೊಡಗಿಸುವಂತೆ ಮಾಡಿದ್ದಾರೆ. ಇತರರು ಹಣ ತೊಡಗಿಸಿ ಷೇರಿನ ಮೌಲ್ಯ ಹೆಚ್ಚಿದಾಗ ತಮ್ಮ ಹಣ ಹಿಂತೆಗೆದುಕೊಂಡಿದ್ದಾರೆ. ಇದರಿಂದ ಷೇರು ಮೌಲ್ಯ ಹಠಾತ್ತನೆ ಕುಸಿದಿದೆ ಹೀಗೆ ಮಾಡುವ ಮೂಲಕ ಅರ್ಷದ್ ವಾರ್ಸಿ 29.43 ಲಕ್ಷ ಹಾಗೂ ಅವರ ಪತ್ನಿ ಮರಿಯಾ 37 ಲಕ್ಷ ಲಾಭ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅರ್ಷದ್ ವಾರ್ಸಿ ಹಾಗೂ ಅವರ ಪತ್ನಿ ಹೂಡಿಕೆ ಮಾಡಿದ್ದರೆನ್ನಲಾಗುತ್ತಿರುವ ಸಾಧನಾ ಬ್ರಾಡ್ಕಾಸ್ಟ್ ಲಿಮಿಟೆಡ್ ಮತ್ತು ಶಾರ್ಪ್ಲೈನ್ ಬ್ರಾಡ್ಕಾಸ್ಟ್ ಲಿಮಿಟೆಡ್ ಕಂಪೆನಿಗಳ ಷೇರಿನ ಮೌಲ್ಯ ಇಂದಿಗೆ (ಮಾರ್ಚ್ 03) ಕ್ರಮವಾಗಿ 5.50 ರು ಹಾಗೂ 6.67 ರುಪಾಯಿಗೆ ಕುಸಿದಿದೆ. 2022ರ ಸೆಪ್ಟೆಂಬರ್ನಲ್ಲಿ ಸಾಧನಾ ಸಂಸ್ಥೆಯ ಷೇರಿನ ಬೆಲೆ 33.15 ರುಪಾಯಿಗಳಿತ್ತು. ಇನ್ನು ಶಾರ್ಪ್ಲೈನ್ ಸಂಸ್ಥೆಯ ಷೇರಿನ ಬೆಲೆ ಕಳೆದ ವರ್ಷದ ಜೂನ್ ತಿಂಗಳಲ್ಲಿ 55 ರುಪಾಯಿಗಳಿತ್ತು. ಆದರೆ ಎರಡೂ ಸಂಸ್ಥೆಯ ಷೇರಿನ ಬೆಲೆ ಈಗ ಕುಸಿದಿದೆ.
ಅರ್ಷದ್ ವಾರ್ಸಿ ಬಾಲಿವುಡ್ನ ಪ್ರತಿಭಾವಂತ ನಟರಲ್ಲಿ ಒಬ್ಬರು. 1996 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅರ್ಷದ್ ವಾರ್ಸಿ ಈವರೆಗೆ ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಇವರು ನಟಿಸಿರುವ ಸರ್ಕಿಟ್ ಪಾತ್ರ ಭಾರಿ ಜನಪ್ರಿಯವಾಗಿದೆ.