ಹಿಂದಿ ಚಿತ್ರರಂಗ (Bollywood) ಹಾಗೂ ಮರಾಠಿ ಚಿತ್ರರಂಗದಲ್ಲಿ (Marathi Industry) ಬಹು ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸುಲೋಚನಾ ಲಾಟ್ಕರ್ (Sulochana Latkar) ಇಂದು (ಜೂನ್ 04) ರಂದು ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಿಂದಿಯ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುಲೋಚನಾ, ಮರಾಠಿಯಲ್ಲಿಯೂ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯ ಸಾಧನೆ ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸುಲೋಚನಾ ಅವರ ಸಹೋದರ, ಸುಲೋಚನಾ ನಿಧನದ ಬಗ್ಗೆ ಮಾಹಿತಿ ನೀಡಿದ್ದು, ಸುಲೋಚನಾ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದವು. ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಅವರು ಇಂದು (ಜೂನ್ 04) ಸಂಜೆ ಆರು ಗಂಟೆಗೆ ನಿಧನರಾದರು ಎಂದಿದ್ದಾರೆ. ನಟಿ ಸುಲೋಚನಾ ಅವರ ಅಂತಿಮ ದರ್ಶನವನ್ನು ಸೋಮವಾರದಂದು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಲೋಚಾ ಅವರು ತಾಯಿಯ ಪಾತ್ರಗಳಿಂದ ಜನಪ್ರಿಯರಾಗಿದ್ದರು. ಅಮಿತಾಬ್ ಬಚ್ಚನ್, ದೇವ್ ಆನಂದ್, ಮನೋಜ್ ಕುಮಾರ್ ಸೇರಿದಂತೆ ಹಿಂದಿಯ ಹಲವು ಸ್ಟಾರ್ ನಟರ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ಸುಲೋಚನಾ ಅವರು 85ನೇ ಹುಟ್ಟುಹಬ್ಬಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟ ಅಮಿತಾಬ್ ಬಚ್ಚನ್, ”ಸುಲೋಚನಾ ಅವರಿಗೆ 86 ನೇ ಹುಟ್ಟುಹಬ್ಬದ ಶುಭಾಶಯಗಳು. ಹಲವಾರು ಸಿನಿಮಾಗಳಲ್ಲಿ ನನ್ನ ತಾಯಿಯ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಅವರೆ ಮನೆಗೆ ಹೋಗಿ ನಮಸ್ಕರಿಸಿದೆನು. ಸುಲೋಚನಾ ಜೀ, ಚಲನಚಿತ್ರಗಳಲ್ಲಿ ಅನೇಕ ನಾಯಕ ನಟರಿಗೆ ತಾಯಿ ಆಗಿದ್ದಾರೆ. ಅವರದ್ದು ಮೃದುವಾದ ಸೌಮ್ಯ ಮತ್ತು ಪ್ರೀತಿಯ ವ್ಯಕ್ತಿತ್ವ. ಅವರಿಗೆ 86 ನೇ ಹುಟ್ಟುಹಬ್ಬ” ಎಂದು ಬರೆದುಕೊಂಡಿದ್ದರು.
ಬಾಲಿವುಡ್ ಹಾಗೂ ಮರಾಠಿ ಎರಡೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ಮಾಪಕ ರಿತೇಶ್ ದೇಶ್ಮುಖ್ ಸಹ ಸುಲೋಚನಾ ಅವರ ಸಾವಿನ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ”ಸುಲೋಚನಾ ದೀದಿಯವರ ಸಾವಿನ ಸುದ್ದಿ ಬಹಳ ಬೇಸರ ತರಿಸಿದೆ. ಮರಾಠಿ ಹಾಗೂ ಹಿಂದಿ ಸಿನಿಮಾ ಪ್ರೇಮಿಗಳ ಹೃದಯಗಳನ್ನು ಆಳಿದ ಅದ್ಭುತ ನಟಿಗೆ ಹೃದಯಾಂತರಾಳದಿಂದ ವಂದನೆಗಳು” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ