ಕೈ ಹಿಡಿಯದ ಬಾಲಿವುಡ್: ಮರಾಠಿ ಚಿತ್ರರಂಗಕ್ಕೆ ಅಕ್ಷಯ್ ಕುಮಾರ್; ಶಿವಾಜಿ ಪಾತ್ರದಲ್ಲಿ ಅಕ್ಕಿ
ಮಹೇಶ್ ಮಂಜರೇಕರ್ ಅವರು ಶಿವಾಜಿ ಅವರ ಜೀವನ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಟೈಟಲ್ ಇಡಲಾಗಿದೆ.

ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರು ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದರು. ಅವರ ಯಾವುದೇ ಸಿನಿಮಾ ರಿಲೀಸ್ ಆಗಲಿ ಒಂದು ಮಟ್ಟಕ್ಕೆ ಕಲೆಕ್ಷನ್ ಮಾಡುತ್ತಿದ್ದವು. ಆದರೆ, ಇತ್ತೀಚೆಗೆ ಹಾಗಿಲ್ಲ. ಅಕ್ಷಯ್ ಕುಮಾರ್ ಸಿನಿಮಾಗಳು ಸೋಲುತ್ತಿವೆ. ಅವರ ಯಾವ ಚಿತ್ರಗಳೂ ಗೆಲುವು ಕಾಣುತ್ತಿಲ್ಲ. ಇತ್ತೀಚೆಗೆ ರಿಲೀಸ್ ಆದ ಅಕ್ಷಯ್ ನಟನೆಯ ‘ರಾಮ್ ಸೇತು’ (Ram Setu Movie) ಚಿತ್ರ ನೂರು ಕೋಟಿ ಕ್ಲಬ್ ಸೇರಲು ಒದ್ದಾಡುತ್ತಿದೆ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಅವರು ಮರಾಠಿ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಮರಾಠ ಸಾಮ್ರಾಜ್ಯದ ದೊರೆ ಆಗಿದ್ದ ಛತ್ರಪತಿ ಶಿವಾಜಿ ಪಾತ್ರದಲ್ಲಿ ಅವರು ನಟಿಸಲಿದ್ದಾರೆ.
ಮಹೇಶ್ ಮಂಜರೇಕರ್ ಅವರು ಶಿವಾಜಿ ಅವರ ಜೀವನ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಟೈಟಲ್ ಇಡಲಾಗಿದೆ. ವಸೀಮ್ ಖುರೇಷಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವಾಜಿ ಮಹಾರಾಜರ ಸ್ವರಾಜ್ಯದ ಕನಸನ್ನು ನನಸು ಮಾಡುವ ಏಕೈಕ ಗುರಿಯನ್ನು ಹೊಂದಿದ್ದ ಏಳು ವೀರ ಯೋಧರ ಕಥೆಯ ಮೇಲೆ ಈ ಚಿತ್ರ ಸಿದ್ಧಗೊಳ್ಳಲಿದೆ.
ಇತ್ತೀಚೆಗೆ ಈ ಚಿತ್ರಕ್ಕೆ ಮುಂಬೈನಲ್ಲಿ ಮುಹೂರ್ತ ನೆರವೇರಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಂಎನ್ಸಿ ಮುಖ್ಯಸ್ಥ ರಾಜ್ ಠಾಕ್ರೆ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಅನ್ನೋದು ವಿಶೇಷ.
ಅಕ್ಷಯ್ ಕುಮಾರ್ ಅವರು ಈ ಚಿತ್ರದಿಂದ ಮರಾಠಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಸಂತಸ ಇದೆ. ಈ ಕುರಿತು ಅಕ್ಕಿ ಮಾತನಾಡಿದ್ದಾರೆ. ‘ನನಗೆ ಇದು ಕನಸಿನ ಪಾತ್ರ ಆಗಿತ್ತು. ಆ ಕನಸು ನನಸಾಗಿದೆ. ಛತ್ರಪತಿ ಶಿವಾಜಿ ಪಾತ್ರ ಮಾಡೋದು ದೊಡ್ಡ ಜವಾಬ್ದಾರಿ. ಮಹೇಶ್ ಅವರ ಜತೆ ಇದೇ ಮೊದಲ ಬಾರಿಗೆ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಅಕ್ಷಯ್ ಹೇಳಿದ್ದಾರೆ.
ಇದನ್ನೂ ಓದಿ:‘ರಾಮ್ ಸೇತು’ ಎದುರು ಹೆಚ್ಚಾಯ್ತು ‘ಕಾಂತಾರ’ ಶೋಗಳ ಸಂಖ್ಯೆ; ಮತ್ತೆ ಎಡವಿದ ಅಕ್ಷಯ್ ಕುಮಾರ್
ಮಹೇಶ್ ಮಂಜರೇಕರ್ ಅವರು ಕಳೆದ 7 ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ‘ಮರಾಠಿ ಸಿನಿಮಾ ರಾಷ್ಟ್ರವ್ಯಾಪಿ ರಿಲೀಸ್ ಆಗುತ್ತಿದೆ ಅನ್ನೋದು ಖುಷಿಯ ವಿಚಾರ. ಜನರು ಛತ್ರಪತಿ ಶಿವಾಜಿಯ ಕಥೆಯನ್ನು ಅರಿಯಬೇಕು. ನಾನು ಈ ಚಿತ್ರಕ್ಕಾಗಿ 7 ವರ್ಷ ಅಧ್ಯಯನ ನಡೆಸಿದ್ದೇನೆ’ ಎಂದಿದ್ದಾರೆ ಮಹೇಶ್.
Published On - 9:54 am, Thu, 3 November 22




