ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು?

Shah Rukh Khan Tamil movie: ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಬೇಕೆಂದರೆ ಅದಕ್ಕೆ ಬಹಳ ಮಹತ್ವದ ಕಾರಣ ಇರಬೇಕು, ಇದೀಗ ಶಾರುಖ್ ಖಾನ್ ತಮಿಳಿನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಅದಕ್ಕೆ ಕಾರಣ ಋಣಭಾರ.

ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು?
Shah Rukh Khan

Updated on: Dec 25, 2025 | 1:50 PM

ಶಾರುಖ್ ಖಾನ್ (Shah Rukh Khan) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ‘ಪಠಾಣ್’, ‘ಜವಾನ್’, ‘ಡಂಕಿ’ ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ ‘ಕಿಂಗ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಪರ ಭಾಷೆಯಲ್ಲಿ ಅತಿಥಿ ಪಾತ್ರಗಳಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಋಣಭಾರ.

ರಜನೀಕಾಂತ್ ನಟಿಸುತ್ತಿರುವ ‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿಯೇ ಹರಿದಾಡುತ್ತಿದೆ. ‘ಜೈಲರ್’ ಸಿನಿಮಾ ತನ್ನ ವಿಶೇಷ ಕ್ಯಾಮಿಯೋ ಪಾತ್ರಗಳಿಂದಲೇ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್​​ಲಾಲ್, ಜಾಕಿ ಶ್ರಾಫ್, ತಮನ್ನಾ, ಸುನಿಲ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ‘ಜೈಲರ್ 2’ ನಿರ್ಮಾಣ ಆಗುತ್ತಿದ್ದು, ಈ ‘ಕ್ಯಾಮಿಯೋ ಗೇಮ್’ ಅನ್ನು ಇನ್ನೂ ದೊಡ್ಡ ಹಂತಕ್ಕೆ ಕೊಂಡೊಯ್ಯುವುದು ನಿರ್ದೇಶಕ ನೆಲ್ಸನ್ ಯೋಜನೆ.

ಇದನ್ನೂ ಓದಿ:ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

ಇದೇ ಕಾರಣಕ್ಕೆ ‘ಜೈಲರ್ 2’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರನ್ನೇ ಕರೆತರಲು ನೆಲ್ಸನ್ ಸಜ್ಜಾಗಿದ್ದಾರೆ. ಆದರೆ ಶಾರುಖ್ ಖಾನ್ ಈ ಆಫರ್ ಅನ್ನು ಒಪ್ಪಿಕೊಳ್ಳಲು ಕಾರಣವೂ ಸಹ ಇದೆ. ಈ ಹಿಂದೆ 2011 ರಲ್ಲಿ ಶಾರುಖ್ ಖಾನ್ ‘ರಾ ಒನ್’ ಹೆಸರಿನ ಭಾರಿ ಅದ್ಧೂರಿ ಸಿನಿಮಾ ಮಾಡಿದ್ದರು. ಆ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹಾಕಿ, ಅದ್ಧೂರಿ ಪ್ರಚಾರ ಮಾಡಿದ್ದರು, ಅದ್ಧೂರಿ ಸೆಟ್​​ಗಳು, ಹಾಲಿವುಡ್ ಲೆವೆಲ್ ವಿಎಫ್​​ಎಕ್ಸ್ ಬಳಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣ ತೀರಿಸುತ್ತಿದ್ದಾರೆ ಶಾರುಖ್ ಖಾನ್.

ಅಲ್ಲದೆ ಶಾರುಖ್ ಖಾನ್ ಅವರಿಗೆ ತಮಿಳು ಚಿತ್ರರಂಗದೊಂದಿಗೆ ಆಪ್ತ ನಂಟಿದೆ. 2000 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ ‘ಹೇ ರಾಮ್’ನಲ್ಲಿ ಕಮಲ್ ಹಾಸನ್ ಜೊತೆಗೆ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಅವರ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾನಲ್ಲಿ ತಮಿಳು ಚಿತ್ರರಂಗಕ್ಕೆ ವಿಶೇಷ ಉಲ್ಲೇಖಗಳನ್ನು ಮಾಡಿದ್ದರು. ಸಾಕಷ್ಟು ತಮಿಳು ನಟರು ಅದರಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ನಿರ್ದೇಶಿಸಿದ್ದು ಸಹ ತಮಿಳು ನಿರ್ದೇಶಕ ಅಟ್ಲಿ. ಈಗ ಮತ್ತೊಮ್ಮೆ ತಮಿಳು ಸಿನಿಮಾನಲ್ಲಿ ನಟಿಸಲು ಬರುತ್ತಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ