ಬೆಂಗಳೂರಲ್ಲಿ ಮಧ್ಯ ಬೆರಳು ತೋರಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್
ಇತ್ತೀಚೆಗೆ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಸಾರ್ವಜನಿಕವಾಗಿ ಅಸಭ್ಯ ಸನ್ನೆ ಮಾಡಿದ ಅವರ ವಿರುದ್ಧ ಪೊಲೀಸರು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಖಾಸಗಿ ಕಾರ್ಯಕ್ರಮದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅವರು ಒಂದು ವಿವಾದ ಮಾಡಿಕೊಂಡಿದ್ದಾರೆ. ಪಬ್ನಲ್ಲಿ ಆರ್ಯನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಸೇರಿದ್ದರು. ಆಗ ಅವರು ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ಅವರ ಮೇಲೆ ಬೆಂಗಳೂರು ಪೊಲೀಸರು (Bengaluru Police) ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯ ಪಬ್ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ 28ರಂದು ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಅವರು ದುರ್ವರ್ತನೆ ತೋರಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪಬ್‌ನ ಬಾಲ್ಕನಿಯಲ್ಲಿ ನಿಂತು ಜನರತ್ತ ಮಧ್ಯದ ಬೆರಳು ತೋರಿಸಿದ ಆರ್ಯನ್ ಅವರ ವರ್ತನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಂಡಿಸಲಾಗುತ್ತಿದೆ.
ಈ ವೇಳೆ ಆರ್ಯನ್ ಖಾನ್ ಜೊತೆ ವಕ್ಫ್ ಸಚಿವ B.Z. ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್, ಬಿಡಿಎ ಅಧ್ಯಕ್ಷ N.A. ಹ್ಯಾರಿಸ್ ಪುತ್ರ ನಲಪಾಡ್ ಕೂಡ ಇದ್ದರು. ಮೊಹಮ್ಮದ್ ನಲಪಾಡ್ ಜೊತೆ ಆರ್ಯನ್ ಖಾನ್ ಅವರು ಪಬ್ಗೆ ಬಂದಿದ್ದರು. ಆರ್ಯನ್ ಖಾನ್ ಅವರು ಮಧ್ಯದ ಬೆರಳು ತೋರಿಸಿದ ವೇಳೆ ಝೈದ್ ಖಾನ್ ಮತ್ತು ಮೊಹಮ್ಮದ್ ನಲಪಾಡ್ ಅವರು ನಗುತ್ತಾ ಪ್ರತಿಕ್ರಿಯಿಸಿದ್ದರು.
ಆರ್ಯನ್ ಖಾನ್ ವೈರಲ್ ವಿಡಿಯೋ:
ಆರ್ಯನ್ ಖಾನ್ ಅವರು ಸಾರ್ವಜನಿಕವಾಗಿ ಅಸಭ್ಯ ಸನ್ನೆ ತೋರಿಸಿದ್ದರೂ ಕೂಡ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿ ಆಗಿಲ್ಲ. ಒಂದು ವೇಳೆ ಜನಸಾಮಾನ್ಯರು ಈ ರೀತಿ ಮಾಡಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಎದ್ದಿದೆ. ಪ್ರಭಾವಿ ವ್ಯಕ್ತಿಗಳ ಮಕ್ಕಳು ಎಂಬ ಕಾರಣಕ್ಕೆ ಪೊಲೀಸರು ಸುಮ್ಮನಾಗಿದ್ದಾರಾ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಬ್ಲಾಕ್ ಬಸ್ಟರ್ ಕೊಟ್ಟ ಬಳಿಕ, ದೊಡ್ಡ ಪರದೆಯತ್ತ ಶಾರುಖ್ ಪುತ್ರ ಆರ್ಯನ್
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರು ನಿರ್ದೇಶಿಸಿದ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸಿರೀಸ್ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರು ನಟಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಶಾರುಖ್ ಜೊತೆ ‘ಕಿಂಗ್’ ಸಿನಿಮಾದಲ್ಲಿ ಸುಹಾನಾ ಖಾನ್ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



