ಕಾಲಿವುಡ್ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಬಾಲಿವುಡ್ನ ಜನಪ್ರಿಯ ನಟ ಶಾರುಖ್ ಖಾನ್ ಒಟ್ಟಾಗಿ ಸಿನಿಮಾ ಮಾಡುತ್ತಾರೆ, ಆ ಬಗ್ಗೆ ಘೋಷಣೆ ಆಗಲಿದೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ, ಈವರೆಗೆ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಸಿನಿಮಾ ಕುರಿತು ಆಗಸ್ಟ್ 15ರಂದು ಪೋಸ್ಟರ್ ರಿಲೀಸ್ ಆಗಲಿದೆ ಎನ್ನಲಾಗಿತ್ತಾದರೂ, ಆ ರೀತಿಯ ಅಪ್ಡೇಟ್ ಏನೂ ಬಂದಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಈಗ ಫ್ಯಾನ್ಸ್ಗೆ ಈ ಸಿನಿಮಾ ವಿಚಾರದಲ್ಲಿ ಖುಷಿ ಸುದ್ದಿ ಸಿಕ್ಕಿದೆ. ಸದ್ದಿಲ್ಲದೆ ಶಾರುಖ್ ಈ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ.
ವಿಜಯ್ ನಟನೆಯ ‘ಬಿಗಿಲ್’, ‘ಮೆರ್ಸಲ್’ ಹಾಗೂ ‘ತೇರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅಟ್ಲೀ ಅವರಿಗಿದೆ. ಈ ಮೂರು ಚಿತ್ರಗಳು ಹಿಟ್ ಚಿತ್ರಗಳು. ಈಗ ಶಾರುಖ್ ಮುಂದಿನ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡೋದು ಖಚಿತವಾಗಿದೆ. ಈ ಸಿನಿಮಾದ ಸೆಟ್ ಫೋಟೋ ಲೀಕ್ ಆಗಿದೆ. ಇದು ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.
ಶಾರುಖ್ ಖಾನ್ ‘ಪಠಾಣ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಕ್ಕಿಂತ ಮೊದಲೇ ಅಟ್ಲೀ-ಶಾರುಖ್ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಆರಂಭವಾಗೋದು ತಡವಾಗಿತ್ತು. ಸೈಲೆಂಟ್ ಆಗಿ ಈ ಸಿನಿಮಾ ಶೂಟಿಂಗ್ ಆರಂಭಗೊಂಡಿರುವುದು ಸಾಕಷ್ಟು ಖುಷಿ ಮೂಡಿಸಿದೆ.
ನಯನತಾರಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಈಗ ಸಾಕ್ಷ್ಯ ಸಿಕ್ಕಿದೆ. ನಯನತಾರಾ ಕೂಡ ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಕೂಡ ಈ ಸಿನಿಮಾದಲ್ಲಿ ನಟಿಸೋದು ಖಚಿತವಾಗಿದೆ. ಈ ಮಧ್ಯೆ, ಪ್ರಿಯಾಮಣಿ, ರಾನಾ ದಗ್ಗುಬಾಟಿ ಕೂಡ ಈ ಸಿನಿಮಾದ ಸೆಟ್ ಸೇರಲಿದ್ದಾರೆ ಎನ್ನುವ ವದಂತಿ ಇದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಸದ್ಯ, ಹೈಜಾಕ್ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿರಲಿವೆ. ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ಸಿದ್ಧಗೊಳ್ಳಲಿದೆ. ಉಳಿದ ಭಾಷೆಗಳಿಗೆ ಡಬ್ ಆಗಿ ತೆರೆ ಕಾಣಲಿದೆ. ಅಕ್ಟೋಬರ್ನಿಂದ ಪೂರ್ಣ ಪ್ರಮಾಣದ ಶೂಟ್ ಆರಂಭಗೊಳ್ಳಲಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ದೊಡ್ಡ ಸೆಟ್ ಈ ಸಿನಿಮಾಗಾಗಿ ರೆಡಿ ಆಗುತ್ತಿದೆ.
ಇದನ್ನೂ ಓದಿ: ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?
Published On - 7:21 pm, Sun, 5 September 21