ಶಾರುಖ್ ‘ಕಿಂಗ್’ ಚಿತ್ರದ ಹೈಪ್​​ಗೆ ದಕ್ಷಿಣದಲ್ಲಿ ಹಬ್ಬಿಸಲಾಗುತ್ತಿದೆ ಸುಳ್ಳುಸುದ್ದಿ?

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ವದಂತಿ ಮತ್ತೆ ಹರಿದಾಡುತ್ತಿದೆ. ಜೈಲರ್ ಎರಡು ಸಿನಿಮಾದ ನಂತರ ಇದೀಗ ರಾಕಾ ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಇದು ಕಿಂಗ್ ಸಿನಿಮಾದ ಬಿಡುಗಡೆಗೂ ಮುನ್ನ ಅವರು ಸದಾ ಸುದ್ದಿಯಲ್ಲಿರುವಂತೆ ಮಾಡಲು ಚಿತ್ರತಂಡ ರೂಪಿಸಿರುವ ಕೇವಲ ಒಂದು ಪ್ರಚಾರದ ತಂತ್ರ ಆಗಿರಬಹುದು ಎಂಬ ಗುಮಾನಿಯಿದೆ.

ಶಾರುಖ್ ‘ಕಿಂಗ್’ ಚಿತ್ರದ ಹೈಪ್​​ಗೆ ದಕ್ಷಿಣದಲ್ಲಿ ಹಬ್ಬಿಸಲಾಗುತ್ತಿದೆ ಸುಳ್ಳುಸುದ್ದಿ?
ಶಾರುಖ್ ಖಾನ್

Updated on: Aug 06, 2026 | 7:42 AM

ಸಿನಿಮಾ ರಂಗದಲ್ಲಿ ಪ್ರತಿದಿನ ಒಂದಲ್ಲಾ ಒಂದು ಹೊಸ ವದಂತಿಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಶಾರುಖ್ (Shah Rukh Khan) ಬಗ್ಗೆ ಸಾಕಷ್ಟು ಗಾಳಿ ಸುದ್ದಿ ಕೇಳಿ ಬರುತ್ತಿದೆ. ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಮತ್ತೆ ಕೇಳಿಬರುತ್ತಿವೆ. ಶಾರುಖ್ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ದಕ್ಷಿಣದ ಸ್ಟಾರ್ ನಟರ ಚಿತ್ರಗಳಲ್ಲಿ ಶಾರುಖ್ ಅಬ್ಬರಿಸಲಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈ ಸುದ್ದಿಗಳಿಗೆ ಯಾವುದೇ ಅಧಿಕೃತ ಆಧಾರಗಳಿಲ್ಲ. ಇದು ಕೇವಲ ಗಾಳಿಸುದ್ದಿ ಎಂಬುದು ಬಹುತೇಕ ಸ್ಪಷ್ಟವಾಗಿದೆ.

ಈ ಹಿಂದೆ ‘ಜೈಲರ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರೆ ಎನ್ನಲಾಗಿತ್ತು. ಅವರು ಒಂದು ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೊನೆಗೆ ಆ ಕ್ಯಾಮಿಯೋ ನಡೆಯಲೇ ಇಲ್ಲ. ಇದರಿಂದ ಇಂತಹ ವರದಿಗಳ ನೈಜತೆಯ ಬಗ್ಗೆಯೇ ಅಭಿಮಾನಿಗಳಲ್ಲಿ ಪ್ರಶ್ನೆಗಳು ಮೂಡಿವೆ. ಸುಳ್ಳು ಸುದ್ದಿಗಳನ್ನು ನಂಬಬಾರದು ಎಂಬ ಪಾಠವೂ ಸಿಕ್ಕಿದೆ.

ಇದೀಗ ಮತ್ತೊಂದು ಹೊಸ ವದಂತಿ ಹುಟ್ಟಿಕೊಂಡಿದೆ. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನಲ್ಲಿ ‘ರಾಕಾ’ ಸಿನಿಮಾ ಮೂಡಿಬರುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಶಾರುಖ್ ಇರಲಿದ್ದಾರೆ ಎನ್ನಲಾಗುತ್ತಿದೆ. ‘ಜವಾನ್’ ಸಿನಿಮಾವನ್ನು ಅಟ್ಲೀ ನಿರ್ದೇಶನ ಮಾಡಿದ್ದರು. ಆ ಸ್ನೇಹದ ಮೇಲೆ ಶಾರುಖ್ ಈ ಚಿತ್ರದಲ್ಲಿ ನಟಿಸಬಹುದು ಎಂಬ ಲೆಕ್ಕಾಚಾರವಿದೆ. ಇದನ್ನು ಬಿಟ್ಟರೆ ಶಾರುಖ್ ‘ರಾಕಾ’ ಚಿತ್ರದಲ್ಲಿ ನಟಿಸುತ್ತಾರೆ ಎಂಬುದಕ್ಕೆ ಬೇರೆ ಯಾವುದೇ ಬಲವಾದ ಆಧಾರವಿಲ್ಲ. ಅವರು ಈ ಪ್ರಾಜೆಕ್ಟ್‌ನಲ್ಲಿ ನಿಜಕ್ಕೂ ಇದ್ದಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಂತಹ ಕ್ಯಾಮಿಯೋ ವದಂತಿಗಳು ಹಬ್ಬಿದಾಗಲೆಲ್ಲಾ ಶಾರುಖ್ ಖಾನ್ ಅವರ ಮುಂಬರುವ ‘ಕಿಂಗ್’ ಸಿನಿಮಾದ ಚರ್ಚೆಯೂ ಹೆಚ್ಚಾಗುತ್ತದೆ. ಈ ಬೆಳವಣಿಗೆಯು ಸಿನಿಮಾ ಪಂಡಿತರ ಗಮನ ಸೆಳೆದಿದೆ. ಇವೆಲ್ಲವೂ ಕೇವಲ ವದಂತಿ ಎಂದು ಕೆಲವರು ಭಾವಿಸಿದ್ದಾರೆ. ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವಂತೆ ಮಾಡಲು ಈ ತಂತ್ರ ಬಳಸಲಾಗುತ್ತಿದೆ ಎಂಬ ಅನುಮಾನವೂ ಇದೆ. ಇದು ಪಕ್ಕಾ ಪ್ರಚಾರದ ಗಿಮಿಕ್ ಇರಬಹುದು ಎನ್ನುವವರೂ ಇದ್ದಾರೆ.

ಇದನ್ನೂ ಓದಿ: ಹಾಲಿವುಡ್‌ ಸಿನಿಮಾಗಳಿಗೆ ಶಾರುಖ್‌ ಖಾನ್‌ ಪೈಪೋಟಿ: ಬದಲಾಗಲ್ಲ ‘ಕಿಂಗ್‌’ ರಿಲೀಸ್‌ ದಿನಾಂಕ

ಪ್ರಸ್ತುತ ಈ ವದಂತಿಗಳು ಪ್ರಚಾರ ತಂತ್ರದ ಭಾಗ ಎಂಬುದಕ್ಕೂ ಯಾವುದೇ ಪುರಾವೆಗಳಿಲ್ಲ. ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ‘ರಾಕಾ’ ಸಿನಿಮಾದಲ್ಲಿ ಶಾರುಖ್ ನಟಿಸುವ ಸುದ್ದಿಯನ್ನು ಕೇವಲ ವದಂತಿ ಎಂದೇ ಪರಿಗಣಿಸಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us