ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ವಶಕ್ಕೆ; ನಟನ ಬಳಿ ಸಿಕ್ತು ಆರು ದುಬಾರಿ ವಾಚ್
ಶಾರುಖ್ ಖಾನ್ ಅವರು ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದ 3ನೇ ಟರ್ಮಿನಲ್ಗೆ ಪ್ರೈವೇಟ್ ಜೆಟ್ನಲ್ಲಿ ಬಂದು ಇಳಿದರು. ಈ ವೇಳೆ ಸುಂಕಾಧಿಕಾರಿಗಳು ಅವರ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಆಗ ಶಾರುಖ್ ಬ್ಯಾಗ್ನಲ್ಲಿ ಆರು ದುಬಾರಿ ವಾಚ್ಗಳು ಸಿಕ್ಕಿವೆ.
ಶಾರುಖ್ ಖಾನ್ (Shah Rukh Khan) ಅವರು ಶುಕ್ರವಾರ ರಾತ್ರಿ (ನವೆಂಬರ್ 11) ಶಾರ್ಜಾದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ಸುಂಕಾಧಿಕಾರಿಗಳು (Custom Officer) ವಶಕ್ಕೆ ಪಡೆದು ಪ್ರಶ್ನೆ ಮಾಡಿದ್ದಾರೆ ಎಂದು ವರದಿ ಆಗಿದೆ. ಶಾರುಖ್ ಖಾನ್ ಅವರು ದುಬಾರಿ ವಾಚ್ಗಳನ್ನು ಹೊಂದಿದ್ದರು. ಇದಕ್ಕಾಗಿ ಅವರು ಸುಂಕ ಪಾವತಿ ಮಾಡಬೇಕಿತ್ತು. ಶುಕ್ರವಾರವೇ ಅವರು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.
ಶಾರುಖ್ ಖಾನ್ ಅವರು ‘ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್ 2022’ಗೆ ತೆರಳಿದ್ದರು. ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗಮನಿಸಿ ‘ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನೆರೇಟಿವ್ ಅವಾರ್ಡ್’ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಗಿಸಿ ಅವರು ಮುಂಬೈಗೆ ಆಗಮಿಸಿದ್ದಾರೆ. ಆಗ ಅವರನ್ನು ವಶಕ್ಕೆ ಪಡೆಯಲಾಗಿದೆ.
ಶಾರುಖ್ ಖಾನ್ ಅವರು ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದ ನ 3ನೇ ಟರ್ಮಿನಲ್ಗೆ ಪ್ರೈವೇಟ್ ಜೆಟ್ನಲ್ಲಿ ಬಂದು ಇಳಿದರು. ಈ ವೇಳೆ ಸುಂಕಾಧಿಕಾರಿಗಳು ಅವರ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಆಗ ಶಾರುಖ್ ಬ್ಯಾಗ್ನಲ್ಲಿ ಆರು ದುಬಾರಿ ವಾಚ್ಗಳು ಸಿಕ್ಕಿವೆ. ಇದರ ಬೆಲೆ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಕ್ಕೆ ಶಾರುಖ್ ಖಾನ್ ಅವರು 6.83 ಲಕ್ಷ ರೂಪಾಯಿ ಸುಂಕ ಪಾವತಿ ಮಾಡಬೇಕಿತ್ತು.
ಸುಂಕಕ್ಕೆ ಸಂಬಂಧಿಸಿ ನೀಡಿದ ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶಾರುಖ್ ಹಾಗೂ ಅವರ ಮ್ಯಾನೇಜರ್ ರಾತ್ರಿಯೇ ತೆರಳಿದ್ದಾರೆ. ಬಾಡಿಗಾರ್ಡ್ ಮೊದಲಾದವರನ್ನು ಪ್ರಶ್ನೆ ಮಾಡಲಾಗಿದೆ. ಅವರು ಮುಂಜಾನೆ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ ಚಿತ್ರದಿಂದ ಹೊರ ನಡೆದ ರಾಣಾ ದಗ್ಗುಬಾಟಿ; ವಿಜಯ್ ಸೇತುಪತಿಗೆ ಸಿಕ್ತು ಚಾನ್ಸ್
ಶಾರುಖ್ ಖಾನ್ ಅವರು ಇತ್ತೀಚೆಗೆ ತಮ್ಮ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ‘ಪಠಾಣ್’ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು. ಈ ಟೀಸರ್ ಸಾಕಷ್ಟು ಸದ್ದು ಮಾಡಿದೆ. ಶಾರುಖ್ ಅವರ ಆ್ಯಕ್ಷನ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಜನವರಿ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ.
Published On - 7:14 pm, Sat, 12 November 22