ನಟ ಶಾರುಖ್ ಖಾನ್ (Shah Rukh Khan) ಅವರು ‘ಪಠಾಣ್’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಗೆಲುವಿನಿಂದ ಅವರ ಅಭಿಮಾನಿಗಳು ಕೂಡ ಸಖತ್ ಖುಷಿಯಾಗಿದ್ದರು. ಆದರೆ, ಅವರ ಫ್ಯಾನ್ಸ್ಗೆ ಈಗ ಬೇಸರದ ಸುದ್ದಿ ಸಿಕ್ಕಿದೆ. ಶಾರುಖ್ ಖಾನ್ ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಮುಂದಿನ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಆದರೆ, ಈ ವೇಳೆ ಉಂಟಾದ ಅವಘಡದಲ್ಲಿ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ರಕ್ತ ಸುರಿದಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
‘ಪಠಾಣ್’ ಸಿನಿಮಾ ಈ ವರ್ಷದ ಆರಂಭದಲ್ಲಿ ತೆರೆಗೆ ಬಂತು. ಈ ಚಿತ್ರ ದೊಡ್ಡ ಯಶಸ್ಸು ಕಂಡಿತು. ಇದು ಶಾರುಖ್ ಖಾನ್ ಅವರಿಗೆ ಹೊಸ ಚೈತನ್ಯ ನೀಡಿದೆ. ಅವರು ತಮ್ಮ ಮುಂದಿನ ಚಿತ್ರವೊಂದರ ಶೂಟಿಂಗ್ಗಾಗಿ ಅಮೆರಿಕಕ್ಕೆ ತೆರಳಿದ್ದರು. ಶೂಟಿಂಗ್ ವೇಳೆ ಮುಂಜಾಗೃತೆ ತೆಗೆದುಕೊಂಡ ಹೊರತಾಗಿಯೂ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಅವರಿಗೆ ಸರ್ಜರಿ ಮಾಡಲಾಗಿದೆ. ಈ ಕಾರಣದಿಂದ ಶೂಟಿಂಗ್ ಅರ್ಧಕ್ಕೆ ನಿಂತಿದೆ.
ಶಾರುಖ್ ಖಾನ್ ಅವರು ಸದ್ಯ ಭಾರತಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ. ಅವರು ಮುಂಬೈ ವಿಮಾನ ನಿಲ್ದಾಣದಿಂದ ಬರುವಾಗ ಮೂಗಿನ ಮೇಲೆ ಬ್ಯಾಂಡೇಜ್ ಕಾಣಿಸಿದೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಬಕ್ರಿದ್ ಹಬ್ಬಕ್ಕೆ ಜೋರಾದ ಕುರಿಗಳ ಹಬ್ಬ; ಬಾಲಿವುಡ್ ನಟ ಶಾರುಖ್ ಖಾನ್ ಹೆಸರಿನ ಕುರಿಗೆ ಭಾರೀ ಡಿಮ್ಯಾಂಡ್
ಶಾರುಖ್ ಖಾನ್ ಅವರು ಸದ್ಯ ‘ಜವಾನ್’ ಹಾಗೂ ‘ಡಂಕಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ಈಗ ಶಾರುಖ್ಗೆ ಗಾಯ ಆಗಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ವಿಳಂಬ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Tue, 4 July 23