
ಶಾರುಖ್ ಖಾನ್, ಭಾರತದ ಸ್ಟಾರ್ ನಟ. ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಶಾರುಖ್ ಖಾನ್ ಸಹ ಒಬ್ಬರು. ನಟನೆಯಿಂದ ಮಾತ್ರವೇ ಅಲ್ಲದೆ ಸ್ಟುಡಿಯೋ, ನಿರ್ಮಾಣ ಸಂಸ್ಥೆ, ರಿಯಲ್ ಎಸ್ಟೇಟ್ ಇನ್ನೂ ಹಲವು ಉದ್ಯಮಗಳಿಂದಲೂ ಶಾರುಖ್ ಖಾನ್ ಹಣ ಗಳಿಸುತ್ತಾರೆ. ಭಾರತದ ಮಾತ್ರವೇ ಅಲ್ಲದೆ ಏಷಿಯಾದ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಟಿಯಲ್ಲದಿದ್ದರೂ ಸಹ ಯಾವ ನಟಿಯರಿಗೂ ಕಡಿಮೆ ಇಲ್ಲದಷ್ಟು ಸಂಭಾವನೆ ಪಡೆಯುತ್ತಾರೆ!
ಗೌರಿ ಖಾನ್, ಭಾರತದ ಸೆಲೆಬ್ರಿಟಿ ಇಂಟೀರಿಯರ್ ಡಿಸೈನರ್ಗಳಲ್ಲಿ ಒಬ್ಬರು. ಹಲವು ವರ್ಷಗಳಿಂದಲೂ ಖಾಸಗಿಯಾಗಿ ಹಲವು ಸೆಲೆಬ್ರಿಟಿಗಳ ಮನೆಗಳ ಒಳಾಂಗಣ ವಿನ್ಯಾಸ ಮಾಡುತ್ತಾ ಬಂದಿರುವ ಗೌರಿ ಖಾನ್, ಕೆಲ ವರ್ಷಗಳ ಹಿಂದೆಯಷ್ಟೆ ಗೆಳತಿ, ಹೃತಿಕ್ ರೋಷನ್ರ ಮಾಜಿ ಪತ್ನಿ ಸುಸೇನ್ ಅವರೊಟ್ಟಿಗೆ ಸೇರಿಕೊಂಡು ತಮ್ಮದೇ ಆದ ಒಳಾಂಗಣ ವಿನ್ಯಾಸ ಸಂಸ್ಥೆಯನ್ನು ಆರಂಭಿಸಿದ್ದು, ದೇಶದ ಹಲವು ಪ್ರಮುಖ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು, ಹೋಟೆಲ್ಗಳ ಒಳಾಂಗಣ ವಿನ್ಯಾಸ ಮಾಡುತ್ತಾರೆ.
ಖ್ಯಾತ ಪಂಜಾಬಿ ಗಾಯಕ ಮಿಕಾ ಸಿಂಗ್, ಹಲವಾರು ಮನೆಗಳನ್ನು ಕಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ 99ನೇ ಮನೆ ನಿರ್ಮಿಸಿದರು. ಅವರ 99ನೇ ಮನೆಯ ಒಳಾಂಗಣ ವಿನ್ಯಾಸವನ್ನು ಗೌರಿ ಖಾನ್ ಅವರಿಂದಲೇ ಮಾಡಿಸಬೇಕು ಎಂಬುದು ಅವರ ಆಸೆಯಾಗಿತ್ತಂತೆ. ಅದರಂತೆ ಅವರು ಶಾರುಖ್ ಖಾನ್ ಅವರನ್ನು ಕೇಳಿದರಂತೆ. ‘ಗೌರಿ ಖಾನ್ ಅವರನ್ನು ಕೇಳಿ, ನಮ್ಮ ಮನೆಯ ಒಳಾಂಗಣ ವಿನ್ಯಾಸ ಅವರು ಮಾಡಿಕೊಡುತ್ತಾರಾ’ ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್ ಖಾನ್, ‘ಅಯ್ಯೋ ಆಕೆಯಿಂದ ಮಾಡಿಸಿದರೆ ನಿನ್ನ ಕತೆ ಮುಗಿದಂತೆ, ಲೂಟಿ ಮಾಡಿಬಿಡುತ್ತಾಳೆ, ಆಕೆ ಬಹಳ ದುಬಾರಿ’ ಎಂದರಂತೆ.
ಇದನ್ನೂ ಓದಿ:ಶಾರುಖ್ ಖಾನ್ ಮನ್ನತ್ಗೆ ಇದೆ 100 ವರ್ಷಗಳ ಇತಿಹಾಸ; ಇದರ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ
ಆದರೆ ಹಠ ಬಿಡದ ಮಿಕ್ಕಾ ಸಿಂಗ್, ಇಲ್ಲಿ ನನ್ನ ಮನೆಯ ವಿನ್ಯಾಸ ಅವರೇ ಮಾಡಬೇಕು ನೀವು ಮಾತನಾಡಿ ಎಂದರಂತೆ. ಆದರೆ ಶಾರುಖ್ ಖಾನ್ ಅದಕ್ಕೆ ಒಪ್ಪದೆ, ನೀನೇ ಮಾತನಾಡು ಎಂದರಂತೆ. ಕೊನೆಗೆ ಮಿಕ್ಕಾ ಸಿಂಗ್, ಗೌರಿ ಖಾನ್ ಜೊತೆ ಮಾತನಾಡಿ, ಮನೆ ಎಲ್ಲ ತೋರಿಸಿದ್ದಾರೆ. ಆಗ ಗೌರಿ ಖಾನ್ ಅವರದ್ದು ಒಂದೇ ಒಂದು ಷರತ್ತು ಇತ್ತಂತೆ. ನಾನು ಏನೇ ಮಾಡಿದರು ಪ್ರಶ್ನೆ ಕೇಳಬಾರದು ಎಂದಿದ್ದರಂತೆ. ಅದರಂತೆ ಮಿಕ್ಕಾ ಸಿಂಗ್ ಸಹ ಯಾವುದೇ ಪ್ರಶ್ನೆ ಕೇಳಲಿಲ್ಲವಂತೆ. ಎರಡು ವರ್ಷಗಳ ಕಾಲ ಒಳಾಂಗಣ ವಿನ್ಯಾಸ ಮಾಡಿದ ಗೌರಿ ಖಾನ್ ಬಹಳ ಚೆನ್ನಾಗಿ ಮಾಡಿದ್ದಾರೆ ಎಂದಿದ್ದಾರೆ ಮಿಕ್ಕಾ ಸಿಂಗ್.
ಅಂದಹಾಗೆ ಶಾರುಖ್ ಖಾನ್ ಹೇಳಿದಂತೆ ಗೌರಿ ಖಾನ್, ಬಹಳ ದುಬಾರಿ ಒಳಾಂಗಣ ವಿನ್ಯಾಸಕಿ. ಮನೆಯ ಒಳಾಂಗಣ ವಿನ್ಯಾಸ ಮಾಡಲು 20-30 ಕೋಟಿ ವರೆಗೂ ಚಾರ್ಜ್ ಮಾಡುತ್ತಾರೆ ಗೌರಿ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ