ಬಾಕ್ಸ್ ಆಫೀಸ್ ಕಲೆಕ್ಷನ್: 16 ದಿನಕ್ಕೆ ‘ಛಾವಾ’ ಗಳಿಸಿದ್ದೆಷ್ಟು?
Chhava Movie box office: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ 16 ದಿನಗಳಾಗಿದ್ದು, ಈ 16 ದಿನಗಳ ಕಲೆಕ್ಷನ್ನಲ್ಲಿ ಹಲವು ದಾಖಲೆಗಳನ್ನು ‘ಛಾವಾ’ ಸಿನಿಮಾ ಮಾಡಿದೆ. ಅಂದಹಾಗೆ 16 ದಿನಕ್ಕೆ ‘ಛಾವಾ’ ಸಿನಿಮಾ ಗಳಿಸಿರುವುದು ಎಷ್ಟು?

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಫೆಬ್ರವರಿ 14 ರಂದು ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಲೆಗಳನ್ನೇ ಎಬ್ಬಿಸಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಬಿಸಾಡಿದೆ. ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ 16 ದಿನಗಳಾಗಿದ್ದು, ಈ 16 ದಿನದಲ್ಲಿ ‘ಛಾವಾ’ ಸಿನಿಮಾ ಗಳಿಸಿದ್ದೆಷ್ಟು? ಸಿನಿಮಾದ ಕಲೆಕ್ಷನ್ ಹೇಗೆ ಸಾಗುತ್ತಿದೆ. ‘ಛಾವಾ’ ಸಿನಿಮಾ ಮುರಿದು ದಾಖಲೆಗಳು ಯಾವುವು? ಇಲ್ಲಿದೆ ಪಟ್ಟಿ.
ಬಿಡುಗಡೆ ಆದ 16 ದಿನಕ್ಕೆ ‘ಛಾವಾ’ ಸಿನಿಮಾ 600 ಕೋಟಿಗೂ ಹೆಚ್ಚು ಹಣ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡಿದೆ. ಛಾವಾ ಸಿನಿಮಾ 16ನೇ ದಿನ ಸುಮಾರು 25 ಕೋಟಿ ರೂಪಾಯಿ ಹಣ ಗಳಿಸಿದೆ ಎನ್ನಲಾಗುತ್ತಿದೆ. 15ನೇ ದಿನ ‘ಛಾವಾ’ದ ಕಲೆಕ್ಷನ್ 13 ಕೋಟಿಗೆ ಇಳಿದಿತ್ತು, ಆದರೆ ವೀಕೆಂಡ್ ಬರುತ್ತಿದ್ದಂತೆ ಸಿನಿಮಾದ ಕಲೆಕ್ಷನ್ನಲ್ಲಿ 60% ಹೆಚ್ಚಾಗಿದೆ. ಆ ಮೂಲಕ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 600 ಕೋಟಿಯನ್ನು ದಾಟಿದೆ. ಈ ಸಿನಿಮಾ ಭಾರತದಲ್ಲಿ ಸುಮಾರು 430 ಕೊಟಿ ರೂಪಾಯಿ ಹಣವನ್ನು ಈ ವರೆಗೆ ಗಳಿಸಿದೆ ಎನ್ನಲಾಗಿದೆ.
16ನೇ ದಿನ ಅಂದರೆ ಶನಿವಾರ 25 ಕೋಟಿ ಕಲೆಕ್ಷನ್ ಮಾಡುವ ಮೂಲಕ, 16ನೇ ದಿನ ಅಥವಾ ಮೂರನೇ ಶನಿವಾರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ದಾಖಲೆಗೆ ವಿಕ್ಕಿ ಕೌಶಲ್-ರಶ್ಮಿಕಾ ನಟನೆಯ ‘ಛಾವಾ’ ಸಿನಿಮಾ ಸೇರಿಕೊಂಡಿದೆ. ‘ಪುಷ್ಪ 2’ ಸಿನಿಮಾ ಮೂರನೇ ಶನಿವಾರ 21.50 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು. ಗಮನಿಸಬೇಕಾದ ಅಂಶವೆಂದರೆ ‘ಪುಷ್ಪ 2’ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು, ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ‘ಛಾವಾ’ ಬಿಡುಗಡೆ ಆದಾಗ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿಲ್ಲ. ‘ಪುಷ್ಪ 2’ ಸಿನಿಮಾಕ್ಕೆ ಹೋಲಿಸಿದರೆ ಅಷ್ಟು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಆದರೂ ಸಹ ‘ಪುಷ್ಪ 2’ ದಾಖಲೆಯನ್ನು ಮುರಿದು ಹಾಕಿದೆ.
ಇದನ್ನೂ ಓದಿ:‘ಛಾವಾ’ ಸಿನಿಮಾ ಮೇಲೆ 100 ಕೋಟಿ ರೂಪಾಯಿ ಕೇಸ್ ಬಿದ್ದ ಬಳಿಕ ಕ್ಷಮೆ ಕೇಳಿದ ನಿರ್ದೇಶಕ
‘ಛಾವಾ’ ಸಿನಿಮಾವು ಛತ್ರಪತಿ ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜ್ರ ಕುರಿತಾಗಿದ್ದಾಗಿದೆ. ಸಿನಿಮಾದಲ್ಲಿ ಅವರ ಪತ್ನಿ ಯೇಸುಭಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಷಯ್ ಖನ್ನಾ, ಔರಂಗಾಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಲಕ್ಷ್ಮಣ್ ಉಠೇಕರ್. ಸಿನಿಮಾಕ್ಕೆ ದಿನೇಶ್ ವಿಜಯನ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ