ಹೊಸ ಅವತಾರದಲ್ಲಿ ಬಂದ ಶಾರುಖ್ ಖಾನ್: ಹುಟ್ಟುಹಬ್ಬಕ್ಕೆ ‘ಕಿಂಗ್’ ಟೀಸರ್ ರಿಲೀಸ್

ಶಾರುಖ್ ಖಾನ್ ಅವರ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ‘ಕಿಂಗ್’ ಸಿನಿಮಾ ತಂಡದಿಂದ ಗಿಫ್ಟ್ ಸಿಕ್ಕಿದೆ. ಈ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಇದು ಸಖತ್ ಮಾಸ್ ಆಗಿದೆ. ರಗಡ್ ಅವತಾರದಲ್ಲಿ ಅಭಿಮಾನಿಗಳನ್ನು ರಂಜಿಸಲು ಶಾರುಖ್ ಸಜ್ಜಾಗಿದ್ದಾರೆ. 2026ರಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಹೊಸ ಅವತಾರದಲ್ಲಿ ಬಂದ ಶಾರುಖ್ ಖಾನ್: ಹುಟ್ಟುಹಬ್ಬಕ್ಕೆ ‘ಕಿಂಗ್’ ಟೀಸರ್ ರಿಲೀಸ್
Shah Rukh Khan

Updated on: Nov 02, 2025 | 1:07 PM

ನಟ ಶಾರುಖ್ ಖಾನ್ (Shah Rukh Khan) ಅವರು ‘ಡಂಕಿ’ ಸಿನಿಮಾ ಬಳಿಕ ಗ್ಯಾಪ್ ತೆಗೆದುಕೊಂಡರು. ಈಗ ಅವರು ‘ಕಿಂಗ್’ (King) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಧಿಕೃತವಾಗಿ ಈ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಇಂದು (ನವೆಂಬರ್ 2) ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ಅಭಿಮಾನಿಗಳಿಗೆ ತುಂಬ ಖುಷಿ ಆಗಿದೆ. ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ಟೀಸರ್​​ನಲ್ಲೇ ಸುಳಿವು ಸಿಕ್ಕಿದೆ. ಕಿಂಗ್ ಸಿನಿಮಾದ ಟೀಸರ್ (King Title Teaser) ಈಗ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಶಾರುಖ್ ಖಾನ್ ಜೊತೆ ‘ಪಠಾಣ್’ ಸಿನಿಮಾ ಮಾಡಿ ಬಹುದೊಡ್ಡ ಹಿಟ್ ನೀಡಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈಗ ‘ಕಿಂಗ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಬಾರಿ ಶಾರುಖ್ ಖಾನ್ ಅವರನ್ನು ಭಾರಿ ರಗಡ್ ಅವತಾರದಲ್ಲಿ ತೋರಿಸಲು ಸಿದ್ದಾರ್ಥ್ ಆನಂದ್ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಂದ ಕಿಂಗ್ ಸಿನಿಮಾದ ಟೀಸರ್​​ಗೆ ಮೆಚ್ಚುಗೆ ಸಿಕ್ಕಿದೆ.

‘ಕಿಂಗ್’ ಚಿತ್ರದ ಟೀಸರ್​ನಲ್ಲಿ ಶಾರುಖ್ ಖಾನ್ ಅವರ ಫಸ್ಟ್ ಲುಕ್ ಬಹಿರಂಗ ಆಗಿದೆ. ಸ್ವತಃ ಶಾರುಖ್ ಖಾನ್ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಎಚ್ಚರಿಕೆ ವಹಿಸಿ ಅವರು ಈ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರೆ. ಯಾವುದೇ ಅವಸರ ಇಲ್ಲದೇ ಸಾಕಷ್ಟು ಸಮಯ ನೀಡಿ ಸಿನಿಮಾ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ‘ಕಿಂಗ್’ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

‘ಕಿಂಗ್’ ಚಿತ್ರದ ಟೈಟಲ್ ಟೀಸರ್​:

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪರದೆಯಲ್ಲಿ ತೆರೆಕಾಣಲಿರುವ ಸುಹಾನಾ ಖಾನ್ ಅವರ ಮೊದಲ ಸಿನಿಮಾ ಇದಾಗಲಿದೆ. ಈ ಮೊದಲು ಅವರು ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದ ‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸಿದ್ದರು. ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಅವರು ಒಟ್ಟಿಗೆ ನಟಿಸುತ್ತಿರುವುದು ‘ಕಿಂಗ್’ ಸಿನಿಮಾದ ಹೈಲೈಟ್.

ಇದನ್ನೂ ಓದಿ: ಶಾರುಖ್ ಖಾನ್ 60ನೇ ವರ್ಷದ ಹುಟ್ಟುಹಬ್ಬ: ಮನ್ನತ್ ಎದುರು ಜನಸಾಗರ

ಶಾರುಖ್ ಖಾನ್ ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಎಷ್ಟೇ ವರ್ಷಗಳು ಉರುಳಿದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಸೂಪರ್ ಸ್ಟಾರ್ ಆಗಿ ಅವರು ಮಿಂಚುತ್ತಿದ್​ದಾರೆ. ಭಾರತದ ಅತಿ ಶ್ರೀಮಂತ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೂಡ ಶಾರುಖ್ ಖಾನ್ ಹೆಸರು ಮುಂಚೂಣಿಯಲ್ಲಿದೆ. ‘ಕಿಂಗ್’ ಗೆದ್ದರೆ ಅವರ ಆಸ್ತಿ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.