ಸ್ಟಾರ್ ಕಿಡ್ಗಳು ತಮ್ಮ ಕುಟುಂಬದ ಪ್ರತಿಷ್ಠೆ ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ಅದಕ್ಕಾಗಿ ಸಾರ್ವಜನಿಕ ಜೀವನದಲ್ಲಿ ಯಾವುದೇ ಎಡವಟ್ಟು ಆಗದಂತೆ ಅವರು ನೋಡಿಕೊಳ್ಳುತ್ತಾರೆ. ಆದರೂ ಕೂಡ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ ಬದುಕಿನಲ್ಲಿ ಒಂದು ತಪ್ಪು ನಡೆದೇ ಹೋಯ್ತು. ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಅವರು ಜೈಲು ಸೇರಬೇಕಾಯಿತು. ಅಂತಿಮವಾಗಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್ ತೀರ್ಪು ನೀಡಿತು. ಸದ್ಯ ಆರ್ಯನ್ ಖಾನ್ ದೋಷಮುಕ್ತರಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರು ಕೋರ್ಟ್ಗೆ ಅಲೆಯುವುದು ತಪ್ಪಿಲ್ಲ. ಹೌದು, ಅವರಿಗೆ ಇನ್ನೂ ಪಾಸ್ಪೋರ್ಟ್ (Passport) ಸಿಕ್ಕಿಲ್ಲ. ಅದರ ಸಲುವಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ವಕೀಲರ ಮೂಲಕ ಆರ್ಯನ್ ಖಾನ್ (Aryan Khan) ಅರ್ಜಿ ಸಲ್ಲಿಸಿದ್ದಾರೆ.
ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡವರು ಆರ್ಯನ್ ಖಾನ್. ಆಗಾಗ ಅವರು ವಿದೇಶಕ್ಕೆ ಪ್ರವಾಸ ತೆರಳುವುದು ಕಾಮನ್. ಆದರೆ ಡ್ರಗ್ಸ್ ಪಾರ್ಟಿಯ ಆರೋಪ ಎದುರಾದಾಗಿನಿಂದ ಅವರು ದೇಶದಿಂದ ಹೊರಗೆ ಹೋಗಲು ಸಾಧ್ಯವಾಗಿಲ್ಲ. ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಅವರು ವಿದೇಶದಲ್ಲೂ ಅನೇಕ ವ್ಯವಹಾರಗಳನ್ನು ಹೊಂದಿದ್ದಾರೆ. ಅದರ ಸಲುವಾಗಿಯೂ ಆರ್ಯನ್ ಖಾನ್ ಹೊರರಾಷ್ಟ್ರಗಳಿಗೆ ತೆರಳಬೇಕಾಗುತ್ತದೆ. ಆದರೆ ಅದೆಲ್ಲದಕ್ಕೂ ಡ್ರಗ್ಸ್ ಕಳಂಕದಿಂದ ಬ್ರೇಕ್ ಬಿಳುವಂತಾಯಿತು.
ಆರ್ಯನ್ ಖಾನ್ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅನೇಕ ಷರತ್ತುಗಳನ್ನು ವಿಧಿಸಲಾಗಿತ್ತು. ಅವರು ತಮ್ಮ ಪಾಸ್ಪೋರ್ಟ್ ಅನ್ನು ಕೂಡ ಕೋರ್ಟ್ಗೆ ಒಪ್ಪಿಸಬೇಕಿತ್ತು. ಅದು ಈಗ ಎನ್ಸಿಬಿ ಕಸ್ಟಡಿಯಲ್ಲಿದೆ. ಪಾಸ್ಪೋರ್ಟ್ ಹಿಂದಿರುಗಿಸಬೇಕು ಎಂದು ಆರ್ಯನ್ ಖಾನ್ ಅರ್ಜಿ ಸಲ್ಲಿಸಿರುವುದರಿಂದ ಅದಕ್ಕೆ ಉತ್ತರ ನೀಡುವಂತೆ ಎನ್ಸಿಬಿಗೆ ಕೋರ್ಟ್ ಸೂಚಿಸಿದೆ. ಈ ಸಂಬಂಧ ಜುಲೈ 13ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
ವೆಬ್ ಸರಣಿ ನಿರ್ದೇಶನ ಮಾಡಲು ಆರ್ಯನ್ ಖಾನ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅನೇಕ ಹಿಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಹೊರಬಂದಿವೆ. ಆರ್ಯನ್ ಖಾನ್ ನಿರ್ದೇಶನ ಮಾಡುತ್ತಿರುವ ವೆಬ್ ಸರಣಿಗೆ ‘ರೆಡ್ ಚಿಲ್ಲೀಸ್’ ಬಂಡವಾಳ ಹೂಡಲಿದೆ ಎಂಬ ಮಾಹಿತಿ ಇದೆ. ಇನ್ನು ಶಾರುಖ್ ಪುತ್ರಿ ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: Aryan Khan: NCB ಅಧಿಕಾರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದ ಆರ್ಯನ್ ಖಾನ್; ಹಲವು ತಿಂಗಳ ಬಳಿಕ ಬಾಯ್ಬಿಟ್ಟ ಆಫೀಸರ್
ಖ್ಯಾತ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್ ಖಾನ್; ಶಾರುಖ್ ಮಗನ ಬಗ್ಗೆ ಹೊಸ ಅಪ್ಡೇಟ್