
ನಟ ಶಾರುಖ್ ಖಾನ್ (Shah Rukh Khan) ಅವರ ಅಭಿಮಾನಿಗಳು ‘ಜವಾನ್’ ಸಿನಿಮಾಗಾಗಿ ಕಾಯುತ್ತಿದ್ದಾರೆ. ‘ಪಠಾಣ್’ ಚಿತ್ರದ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ ಶಾರುಖ್ ಅವರು ‘ಜವಾನ್’ (Jawan) ಸಿನಿಮಾದಿಂದ ಮತ್ತೊಮ್ಮೆ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾದ ಬಗ್ಗೆ ಹೈಪ್ ಹೆಚ್ಚಾಗಲು ಹಲವು ಕಾರಣಗಳಿವೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ವಿಜಯ್ ಸೇತುಪತಿ, ನಯನತಾರಾ ಮುಂತಾದ ಘಟಾನುಘಟಿ ಕಲಾವಿದರು ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗ ‘ಜವಾನ್’ ಟೀಸರ್ (Jawan teaser) ಬಗ್ಗೆ ಹೊಸ ಸುದ್ದಿ ಕೇಳಿಬಂದಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಈ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಸೆಪ್ಟೆಂಬರ್ 7ರಂದು ‘ಜವಾನ್’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೆ ಇನ್ನು 2 ತಿಂಗಳು ಮಾತ್ರ ಬಾಕಿ ಇದೆ. ಹಾಗಾಗಿ ಈಗಿನಿಂದಲೇ ಪ್ರಚಾರ ಕಾರ್ಯ ಶುರುಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಜುಲೈ 7 ಅಥವಾ ಜುಲೈ 15ರಂದು ‘ಜವಾನ್’ ಟೀಸರ್ ಅನಾವರಣ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಇದೊಂದು ಆ್ಯಕ್ಷನ್ ಸಿನಿಮಾ ಆಗಿರಲಿದ್ದು, ಟೀಸರ್ನಲ್ಲಿ ಸಾಹಸ ದೃಶ್ಯಗಳ ಝಲಕ್ ಕಾಣಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Suhana Khan: ಜೊತೆಯಾಗಿ ಸಿನಿಮಾ ಮಾಡ್ತಾರೆ ಶಾರುಖ್ ಖಾನ್-ಸುಹಾನಾ ಖಾನ್? ತಂದೆ-ಮಗಳ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ
‘ತುಂಬ ಅದ್ದೂರಿಯಾಗಿ ಜವಾನ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುವುದು. ಈವರೆಗೂ ಕಾಣಿಸಿಕೊಂಡಿರದ ಗೆಟಪ್ನಲ್ಲಿ ಶಾರುಖ್ ಖಾನ್ ಪಾತ್ರ ಇರಲಿದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಬಹಳ ಗ್ರ್ಯಾಂಡ್ ಆಗಿ ಟೀಸರ್ ಹಂಚಿಕೊಳ್ಳಲಾಗುವುದು’ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಈ ಬಗ್ಗೆ ‘ಜವಾನ್’ ಬಳಗದಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಇತ್ತೀಚೆಗೆ ಶಾರುಖ್ ಖಾನ್ ಅವರು ಟ್ವಿಟರ್ನಲ್ಲಿ ಫ್ಯಾನ್ಸ್ ಜೊತೆ ಪ್ರಶ್ನೋತ್ತರ ನಡೆಸಿದ್ದರು. ಆ ವೇಳೆ ಟೀಸರ್ ರಿಲೀಸ್ ಬಗ್ಗೆ ಅವರು ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 31 ವರ್ಷ; ಅಂದು ಮಾಡಿದ ತಪ್ಪನ್ನು ಇಂದು ಒಪ್ಪಿಕೊಂಡ ನಟ
ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟ 31 ವರ್ಷ ಕಳೆದಿದೆ. ಇಂದಿಗೂ ಅವರು ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ‘ಪಠಾಣ್’ ಗೆದ್ದ ಬಳಿಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಈಗ ಅವರ ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಪುತ್ರ ಆರ್ಯನ್ ಖಾನ್ ನಿರ್ದೇಶಕನಾಗಿ ವೃತ್ತಿಜೀವನ ಆರಂಭಿಸುತ್ತಿದ್ದಾರೆ. ಮಗಳು ಸುಹಾನಾ ಖಾನ್ಗೆ ನಟನೆ ಬಗ್ಗೆ ಆಸಕ್ತಿ ಇದೆ. ಅವರ ಮೊದಲ ಚಿತ್ರ ‘ದಿ ಆರ್ಚೀಸ್’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.