ಆದಿಪುರುಷ್ ಸಿನಿಮಾಕ್ಕೆ ಛೀಮಾರಿ ಹಾಕಿದ ಅಲಹಾಬಾದ್ ಹೈಕೋರ್ಟ್
Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾಕ್ಕೆ ಅಲಹಾಬಾದ್ ಹೈಕೋರ್ಟ್ ಛೀಮಾರಿ ಹಾಕಿದೆ. ವಯಸ್ಕರ ಸಿನಿಮಾದಲ್ಲಿರಬೇಕಾದ ದೃಶ್ಯಗಳು ರಾಮಾಯಣದ ಸಿನಿಮಾದಲ್ಲಿದೆ ಎಂದು ಕಟು ಟೀಕೆ ಮಾಡಿದೆ.
ಪ್ರಭಾಸ್ (Prabhas) ನಟನೆಯ ಬಹುಕೋಟಿ ಸಿನಿಮಾ ಆದಿಪುರುಷ್ (Adipurush) ಬಾಕ್ಸ್ ಆಫೀಸ್ನಲ್ಲಿ ಉತ್ತಮ ಮೊತ್ತವನ್ನೇನೋ ಕಲೆ ಹಾಕಿದೆ ಆದರೆ ಜನರ ತೀವ್ರ ಟೀಕೆಗೆ ಗುರಿಯಾಗಿದೆ. ರಾಮಾಯಣ (Ramayan) ಕತೆ ಆಧರಿತ ಈ ಸಿನಿಮಾದ ಮೇಕಿಂಗ್, ಪಾತ್ರಗಳ ವೇಷ, ಸಂಭಾಷಣೆ, ಕಲಾವಿದರ ನಟನೆ, ಐತಿಹಾಸಿಕ ಸ್ಥಳಗಳ ಮರುಸೃಷ್ಟಿ ಇನ್ನೂ ಹಲವು ವಿಷಯಗಳ ಬಗ್ಗೆ ಟೀಕಿಸಲಾಗುತ್ತಿದೆ. ಆದಿಪುರುಷ್ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ ಎಂದು ಹಲವೆಡೆ ಸಿನಿಮಾದ ವಿರುದ್ಧ ದೂರುಗಳು ಸಹ ದಾಖಲಾಗಿವೆ. ಇದೀಗ ಅಲಹಾಬಾದ್ ಹೈಕೋರ್ಟ್ ಸಹ ಆದಿಪುರುಷ್ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಛೀಮಾರಿ ಹಾಕಿದೆ.
ಈ ಸಿನಿಮಾದ ಸಂಭಾಷಣೆ ಹಲೆವೆಡೆ ಪ್ರಶ್ನಾರ್ಹವಾಗಿದೆ ಎಂದಿರುವ ನ್ಯಾಯಮೂರ್ತಿಗಳ ಪೀಠ, ಈ ಪ್ರಕರಣದಲ್ಲಿ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಅನ್ನು ಪ್ರತಿವಾದಿ ಮಾಡಿ ಎಂದು ಸೂಚಿಸಿದೆ. ಮಾತ್ರವಲ್ಲದೆ, ”ಹಿಂದೂಗಳು ಸಹಿಷ್ಣುಗಳು ಎಂದು ಹೇಳಲಾಗುತ್ತದೆ, ಹಾಗೆಂದು ಆ ಸಹಿಷ್ಣುತೆಯ ಪರೀಕ್ಷೆ ಮಾಡಲಾಗುತ್ತಿದೆಯಾ?” ಎಂದು ಖಾರವಾಗಿಯೇ ನ್ಯಾಯಾಲಯ ಪ್ರಶ್ನಿಸಿದೆ.
”ಹನುಮ ಹಾಗೂ ಸೀತೆಯರನ್ನು ಅವರೇನೂ ಅಲ್ಲ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಕೆಲವು ದೃಶ್ಯಗಳಂತೂ ಎ ಪ್ರಮಾಣ ಪತ್ರ ಪಡೆದ ಸಿನಿಮಾದಲ್ಲಿ ಇರಬೇಕಾದ ದೃಶ್ಯಗಳಿವೆ. ಈ ಸಿನಿಮಾವನ್ನು ನೋಡುವುದೇ ಕಷ್ಟ. ಪುಣ್ಯಕ್ಕೆ ಈ ಸಿನಿಮಾ ನೋಡಿದ ಜನ ಶಾಂತರೀತಿಯಲ್ಲಿ ವರ್ತಿಸಿದ್ದಾರೆ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿಲ್ಲ. ಕೆಲವು ದೃಶ್ಯಗಳನ್ನು ಸಿನಿಮಾ ಬಿಡುಗಡೆಗೆ ಮುನ್ನವೇ ತೆಗೆದು ಹಾಕಬೇಕಿತ್ತು. ಸೆನ್ಸಾರ್ ಬೋರ್ಡ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದೆಯೇ” ಎಂದು ಪ್ರಶ್ನೆ ಮಾಡಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ಸಂಭಾಷಣೆಗಳನ್ನು ತೆಗೆಯಲಾಗಿದೆ ಎಂದು ವಕೀಲರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ”ಸಂಭಾಷಣೆಗಳನ್ನು ತೆಗೆದು ಬೇರೆ ಸೇರಿಸಿದ್ದೀರಿ ಆದರೆ ದೃಶ್ಯಗಳಿಗೆ ಏನು ಮಾಡಿದ್ದೀರಿ? ಅವು ಹಾಗೆಯೇ ಇವೆಯಲ್ಲವೆ?” ಎಂದು ಪ್ರಶ್ನಿಸಿದ್ದಾರೆ ನ್ಯಾಯಮೂರ್ತಿಗಳು. ಸಿನಿಮಾಕ್ಕೆ ಪ್ರದರ್ಶನಕ್ಕೆ ಮುನ್ನ ಡಿಸ್ಕೇಮರ್ ಹಾಕಿರುವ ಬಗ್ಗೆ ಗಮನ ಸೆಳೆದಾಗ ಆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ”ನೀವು ರಾಮ, ಲಕ್ಷ್ಮಣ, ಸೀತೆ, ರಾವಣ, ಲಂಕೆಯನ್ನು ತೋರಿಸಿ ಇದು ರಾಮಾಯಣ ಅಲ್ಲ ಎಂದು ಹೇಳುತ್ತೀರಿ. ದೇಶದ ಜನರನ್ನು ತಲೆ ಇಲ್ಲದವರು ಎಂದು ತಿಳಿದಿದ್ದೀರಾ?” ಎಂದು ಪ್ರಶ್ನೆ ಮಾಡಿದೆ.
ಆದಿಪುರುಷ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದದಲ್ಲಿಯೇ ಇದೆ. ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಿನಿಮಾದ ಸಂಭಾಷಣೆಗಳು ಕೀಳು ಅಭಿರುಚಿಯಿಂದ ಕೂಡಿವೆ. ಸಿನಿಮಾದ ನಿರ್ದೇಶಕರು ಮೂಲ ಕತೆಯಲ್ಲಿ ಇಲ್ಲದ ದೃಶ್ಯಗಳನ್ನು ಸೇರಿಸಿದ್ದಾರೆ. ರಾವಣನ ಪಾತ್ರ ಸೇರಿದಂತೆ ಕೆಲವು ಪಾತ್ರಗಳ ವ್ಯಕ್ತಿತ್ವವನ್ನು ತಿರುಚಿದ್ದಾರೆ. ಕತೆಗೆ ನಿಷ್ಠರಾಗುವ ಬದಲಿಗೆ ಹೀರೋಯಿಸಂಗೆ ಹೆಚ್ಚು ಒತ್ತು ನೀಡಲಾಗಿದೆ. ಕೆಲವು ಪಾತ್ರಗಳನ್ನು ಕೈಬಿಡಲಾಗಿದೆ, ಪಾತ್ರಗಳ ವೇಷ ಭೂಷಣಗಳನ್ನು ಬದಲಾಯಿಸಲಾಗಿದೆ, ಕೇಶ ವಿನ್ಯಾಸಗಳನ್ನು ಬದಲಾಯಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದಿಪುರುಷ್ ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ