ಮುಂಬರುವ ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ಗೆ ಸಾಲುಗಟ್ಟಿ ನಿಂತಿವೆ. ಆ ಪೈಕಿ ಶಾರುಖ್ ಖಾನ್ ನಟನೆಯ ‘ಜವಾನ್’ (Jawan Movie) ಸಿನಿಮಾಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಟೀಸರ್ ಯಾವಾಗ ಬರಲಿದೆ ಎಂದು ಪ್ರಶ್ನೆ ಕೇಳುತ್ತಿದ್ದ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಈಗ ಸರ್ಪ್ರೈಸ್ ಸಿಕ್ಕಿದೆ. ಅಚ್ಚರಿ ಏನೆಂದರೆ ಟೀಸರ್ ಸಹವಾಸವೇ ಬೇಡ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಅಂದರೆ, ಟೀಸರ್ ಬದಲು ನೇರವಾಗಿ ಟ್ರೇಲರ್ (Jawan Trailer) ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಹರಡಿದೆ. ಅದೂ ಅಲ್ಲದೇ, ‘ಜವಾನ್’ ಟ್ರೇಲರ್ ಬಿಡುಗಡೆಗೆ ಒಂದು ಹಾಲಿವುಡ್ ಸಿನಿಮಾದ ಜೊತೆ ಕೈ ಜೋಡಿಸಲಾಗುತ್ತಿದೆ. ಯಾವುದು ಆ ಸಿನಿಮಾ? ‘ಮಿಷನ್ ಇಂಪಾಸಿಬಲ್ 7’!
ಈ ಸುದ್ದಿಯ ಬಗ್ಗೆ ಶಾರುಖ್ ಖಾನ್ ಅವರಿಂದಾಗಲೀ ಅಥವಾ ನಿರ್ಮಾಣ ಸಂಸ್ಥೆಯಾದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಕಡೆಯಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಕೂಡ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ‘ಜವಾನ್’ ಸಿನಿಮಾದ ರಿಲೀಸ್ ಡೇಟ್ ಕೆಲವೇ ದಿನಗಳ ಹಿಂದೆ ಅನೌನ್ಸ್ ಆಗಿತ್ತು. ಸೆಪ್ಟೆಂಬರ್ 7ರಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು. ಅದರ ಬೆನ್ನಲ್ಲೇ ಟೀಸರ್ ಬರಬಹುದು ಎಂದು ಶಾರುಖ್ ಖಾನ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದನ್ನು ನೀಡಲು ಪ್ಲ್ಯಾನ್ ನಡೆದಿದೆ.
ಇದನ್ನೂ ಓದಿ: Shah Rukh Khan: ‘ಪಠಾಣ್’ ರೀತಿ ‘ಜವಾನ್’ ಕೂಡ ಮಾಡಲಿದೆ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್; ಸಿಕ್ಕಿದೆ ಮುನ್ಸೂಚನೆ
‘ಜವಾನ್’ ಸಿನಿಮಾದ ಟೀಸರ್ ಬದಲು ನೇರವಾಗಿ ಟ್ರೇಲರ್ ರಿಲೀಸ್ ಮಾಡಿದರೆ ಧಮಾಕ ಜೋರಾಗಿ ಇರಲಿದೆ. ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ಅಭಿನಯಿಸಿರುವ ‘ಮಿಷನ್ ಇಂಪಾಸಿಬಲ್ 7’ ಸಿನಿಮಾ ಜುಲೈ 12ರಂದು ಬಿಡುಗಡೆ ಆಗಲಿದೆ. ಆ ಸಿನಿಮಾದ ಜೊತೆ ‘ಜವಾನ್’ ಟ್ರೇಲರ್ ಅಟ್ಯಾಚ್ ಮಾಡಲಾಗುವುದು. ಚಿತ್ರಮಂದಿರಗಳಲ್ಲಿ ‘ಮಿಷನ್ ಇಂಪಾಸಿಬಲ್ 7’ ಚಿತ್ರದ ಇಂಟರ್ವಲ್ ಸಮಯದಲ್ಲಿ ಈ ಟ್ರೇಲರ್ ಬಿತ್ತರ ಆಗಲಿದೆ. ಅದೇ ದಿನ ಸೋಶಿಯಲ್ ಮೀಡಿಯಾದಲ್ಲೂ ಟ್ರೇಲರ್ ರಿಲೀಸ್ ಆಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 31 ವರ್ಷ; ಅಂದು ಮಾಡಿದ ತಪ್ಪನ್ನು ಇಂದು ಒಪ್ಪಿಕೊಂಡ ನಟ
ಕಾಲಿವುಡ್ನ ಸ್ಟಾರ್ ನಿರ್ದೇಶಕ ಅಟ್ಲಿ ಕುಮಾರ್ ಅವರು ‘ಜವಾನ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶಾರುಖ್ ಖಾನ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ‘ಪಠಾಣ್’ ಸಿನಿಮಾದಿಂದ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ ಶಾರುಖ್ ಖಾನ್ಗೆ ದೊಡ್ಡ ಸಕ್ಸಸ್ ಸಿಕ್ಕಿತು. ಈಗ ಅವರು ‘ಜವಾನ್’ ಸಿನಿಮಾದಿಂದಲೂ ಅಂಥದ್ದೇ ಗೆಲುವು ಪಡೆಯಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.