ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಮೊದಲ ಎರಡು ದಿನ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಸಿನಿಪ್ರಿಯರು ‘ಪಠಾಣ್’ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಈಗಾಗಲೇ ಅಬ್ಬರದ ಕಲೆಕ್ಷನ್ ಮಾಡುತ್ತಿರುವ ಪಠಾಣ್ (Pathaan Movie Collection) ಚಿತ್ರ ಕೆಲವೇ ದಿನಗಳಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ. ಹೀಗಿರುವಾಗಲೇ ಈ ಚಿತ್ರದ ಶುಕ್ರವಾರದ (ಜನವರಿ 27) ಗಳಿಕೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇದು ಸರ್ವೇ ಸಾಮಾನ್ಯ ಅನ್ನೋದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಜನವರಿ 25ರಂದು ತೆರೆಗೆ ಬಂತು. ದೇಶಪ್ರೇಮದ ಕಥಾ ಹಂದರ ಇರುವ ಈ ಸಿನಿಮಾ ಗಣರಾಜ್ಯೋತ್ಸವದ ಸಂದರ್ಭದಲ್ಲೇ ತೆರೆಗೆ ಬಂತು. ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 55 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಎರಡನೇ ದಿನವಾದ ಗುರುವಾರ (ಜನವರಿ 26) 68 ಕೋಟಿ ರೂಪಾಯಿ ಕಮಾಯಿ ಮಾಡಿತು. ಸರ್ಕಾರಿ ರಜೆಯ ಕಾರಣ ಹೆಚ್ಚಿನ ಕಲೆಕ್ಷನ್ ಆಯಿತು.
ಶುಕ್ರವಾರ ಈ ಚಿತ್ರ 30-35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಗುರುವಾರದ ಕಲೆಕ್ಷನ್ಗೆ ಹೋಲಿಕೆ ಮಾಡಿದರೆ ಶುಕ್ರವಾರದ ಕಲೆಕ್ಷನ್ ಅರ್ಧದಷ್ಟು ಇಳಿಕೆ ಆಗಿದೆ. ವಾರದ ದಿನ ಎಂಬುದೇ ಇದಕ್ಕೆ ಕಾರಣ. ಶುಕ್ರವಾರ ಯಾವುದೇ ರಜೆ ಇರಲಿಲ್ಲ. ಹೀಗಾಗಿ, ಅನೇಕರಿಗೆ ಚಿತ್ರಮಂದಿರಕ್ಕೆ ತೆರಳೋಕೆ ಸಾಧ್ಯವಾಗಿಲ್ಲ. ಇದು ಸಿನಿಮಾ ಗಳಿಕೆ ಇಳಿಕೆ ಆಗಲು ಕಾರಣ ಅನ್ನೋದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.
ಇದನ್ನೂ ಓದಿ: ಮೊದಲ ವೀಕೆಂಡ್ ಕಲೆಕ್ಷನ್ನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕಲಿದೆ ‘ಪಠಾಣ್’
ಶನಿವಾರ (ಜನವರಿ 28) ಹಾಗೂ ಭಾನುವಾರ (ಜನವರಿ 29) ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಎರಡು ದಿನಕ್ಕೆ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಶುಕ್ರವಾರ ಚಿತ್ರದ ಗಳಿಕೆ ಕಡಿಮೆ ಆದರೂ ಶನಿವಾರ ಹಾಗೂ ಭಾನುವಾರ ಸಿನಿಮಾ ಅಬ್ಬರಿಸುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಶೋಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ