ಹೀರೋನಾ ಅಥವಾ ವಿಲನ್? ‘ಜವಾನ್’ ಆಗಿ ಬಂದ ಶಾರುಖ್

|

Updated on: Aug 31, 2023 | 3:41 PM

Jawan Trailer: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಶಾರುಖ್ ಖಾನ್ ಅಭಿಮಾನಿಗಳು ಕೋರುವ ಎಲ್ಲವೂ ಸಿನಿಮಾದಲ್ಲಿರುವುದನ್ನು ಈಗ ಬಿಡುಗಡೆ ಆಗಿರುವ ಟ್ರೈಲರ್ ಖಾತ್ರಿಪಡಿಸುತ್ತಿದೆ.

ಹೀರೋನಾ ಅಥವಾ ವಿಲನ್? ಜವಾನ್ ಆಗಿ ಬಂದ ಶಾರುಖ್
ಜವಾನ್
Follow us on

ಪಠಾಣ್‘ (Pathaan) ಸಿನಿಮಾ ಮೂಲಕ ಬಳಲಿದ್ದ ಬಾಲಿವುಡ್​ಗೆ (Bollywood) ಜೀವಜಲ ನೀಡಿದ್ದ ಶಾರುಖ್ ಖಾನ್ ಇದೀಗ ‘ಜವಾನ್’ ಮೂಲಕ ತಮ್ಮ ಮ್ಯಾಜಿಕ್ ಅನ್ನು ಮುಂದುವರೆಸಲು ಬಂದಿದ್ದಾರೆ. ಬಾಲಿವುಡ್ ಬಾದ್​ಶಾ ಶಾರುಖ್ ನಟನೆಯ ‘ಜವಾನ್’ ಸಿನಿಮಾದ ಟ್ರೈಲರ್ ಇಂದಷ್ಟೆ (ಆಗಸ್ಟ್ 31) ಬಿಡುಗಡೆ ಆಗಿದ್ದು, ಶಾರುಖ್ ಅಭಿಮಾನಿಗಳು ಕೋರುವ ಎಲ್ಲವೂ ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೈಲರ್ ಖಾತ್ರಿ ಪಡಿಸುತ್ತಿದೆ. ಹಲವು ಶೇಡ್​ಗಳಲ್ಲಿ ಶಾರುಖ್ ಖಾನ್ ‘ಜವಾನ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಲವ್, ಸೆಂಟಿಮೆಂಟ್, ಆಕ್ಷನ್, ಹಾಸ್ಯ ಎಲ್ಲವನ್ನು ಒಳಗೊಂಡಿರುವ ‘ಸಿದ್ಧ ಸೂತ್ರದ ಪ್ಯಾಕೇಜ್ಡ್’ ಸಿನಿಮಾ ಇದ್ದಂತಿದೆ.

‘ಒಂದರ ಮೇಲೊಂದು ಯುದ್ಧಗಳನ್ನು ಸೋಲುತ್ತಲೇ ಇದ್ದ ರಾಜ ಹಸಿವು, ಬಳಲಿಕೆಯಿಂದ ಕಾಡಿನಲ್ಲಿ ಸುತ್ತುತ್ತಲೇ ಇದ್ದ, ಆದರೆ ವಿಪರೀತ ಕೋಪದಿಂದ’ ಹೀಗೊಂದು ಹಿನ್ನೆಲೆ ಧ್ವನಿಯಿಂದ ಶುರುವಾಗುವ ಟ್ರೈಲರ್​ ನಲ್ಲಿ ಆ ನಂತರ ಸರಣಿ ಆಕ್ಷನ್ ದೃಶ್ಯಗಳು ಚಕಚಕನೆ ಬದಲಾಗುತ್ತವೆ. ದೊಡ್ಡ ದೊಡ್ಡ ಸೆಟ್​ಗಳು, ದೊಡ್ಡ ಲ್ಯಾಂಡ್​ಸ್ಕೇಪ್, ಹೊಸ ಬಗೆಯ ಬೃಹತ್ ಶಸ್ತ್ರಾಸ್ತ್ರ​ಗಳು, ಒಂದು ಅದ್ಧೂರಿ ಆಕ್ಷನ್-ಮಾಸ್ ಎಂಟರ್ಟೈನ್​ಮೆಂಟ್​ನ ಎಲ್ಲ ‘ಟೂಲ್’​ಗಳನ್ನು ‘ಜವಾನ್’ ಸಿನಿಮಾ ಒಳಗೊಂಡಿರುವುದನ್ನು ಟ್ರೈಲರ್ ಸಾರಿ ಹೇಳುತ್ತಿದೆ.

ಇಂದು ಬಿಡುಗಡೆ ಆದ ‘ಜವಾನ್’ ಸಿನಿಮಾದ ಟ್ರೈಲರ್

ಶಾರುಖ್ ಖಾನ್ ಹಲವು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲವರ್ ಬಾಯ್, ವೀರ ಯೋಧ, ದೇಶಪ್ರೇಮಿ, ಹತಾಶ ನಾಗರೀಕ, ಅಪಹರಣಕಾರ, ಕಾನೂನು ಕೈಗೆತ್ತಿಕೊಂಡಿರುವ ವಿಲನ್, ಜವಾಬ್ದಾರಿಯುತ ತಂದೆ ಹೀಗೆ ಪಾತ್ರದ ಹಲವು ಶೇಡ್​​ಗಳು ಟ್ರೈಲರ್​ನಲ್ಲಿ ಕಾಣುತ್ತವೆ. ಜೊತೆಗೆ ಸಿನಿಮಾದ ಹಾಡುಗಳ ಕೆಲವು ತುಣುಕುಗಳೂ ಸಹ ಟ್ರೈಲರ್​ನಲ್ಲಿ ಇಣುಕಿವೆ.

ಇದನ್ನೂ ಓದಿ:ಮಧ್ಯರಾತ್ರಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ ಶಾರುಖ್ ಖಾನ್; ನಟನ ನಂಬಿಕೆಗೆ ಕಾರಣವೇನು?

ಟ್ರೈಲರ್​ನಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶವೆಂದರೆ ನಾಯಕಿಯರು. ಹಲವು ಮಹಿಳಾ ಪಾತ್ರಗಳು ಸಿನಿಮಾದಲ್ಲಿವೆ. ನಾಯಕಿ ನಯನತಾರಾ ಸೈನ್ಯಾಧಿಕಾರಿ ಕಾಣಿಸಿಕೊಂಡಿರುವ ಜೊತೆಗೆ ಶಾರುಖ್ ಖಾನ್ ಪ್ರೇಯಸಿಯೂ ಆಗಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿ ಶಾರುಖ್ ಖಾನ್ ಅನ್ನೇ ಎತ್ತಿ ಬಿಸಾಡುತ್ತಿದ್ದಾರೆ ದೀಪಿಕಾ. ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ದೋಗ್ರಾ ಇನ್ನೂ ಕೆಲವು ನಟಿಯರಿಗೆ ಪವರ್​ಫುಲ್ ಪಾತ್ರವೇ ಇದ್ದಂತಿದೆ. ಟ್ರೈಲರ್​ನಲ್ಲಿ ಬರುವ ಫನ್ನಿ ಡೈಲಾಗ್ ಒಂದರಲ್ಲಿ ಆಲಿಯಾ ಭಟ್ ಬೇಕೆಂದು ಸಹ ಶಾರುಖ್ ಖಾನ್ ಕೇಳುತ್ತಿದ್ದಾರೆ. ಹಾಗಿದ್ದರೆ ಆಲಿಯಾ ಭಟ್ ಸಹ ಇದ್ದಾರೆಯೇ? ಸಿನಿಮಾ ನೋಡಿದ ಮೇಲಷ್ಟೆ ಉತ್ತರ ಸಿಗಲಿದೆ.

ಇನ್ನು ಖಳನ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದು, ಇವರಿಗೂ ಸಹ ಎರಡು ಶೇಡ್​ನ ಪಾತ್ರವಿದೆ. ಯುವಕನಾಗಿದ್ದಾಗ ಹಾಗೂ ವಯಸ್ಸಾದ ಬಳಿಕ ಎರಡು ಭಿನ್ನ ಶೇಡ್​ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಮಾಸ್ ಸಿನಿಮಾ ವಿಲನ್​ಗಳ ಮಾಮೂಲಿ ವೃತ್ತಿಯಾಗಿರುವ ಶಸ್ತ್ರಾಸ್ತ್ರ ಕಳ್ಳಸಾಗಣೆದಾರನ ವೃತ್ತಿಯನ್ನೇ ವಿಜಯ್ ಸೇತುಪತಿ ‘ಜವಾನ್’ ಸಿನಿಮಾದಲ್ಲಿ ಮಾಡಿದ್ದಾರೆ.

ಸೈನ್ಯದಲ್ಲಿ ಕೆಲಸ ಮಾಡುವ ದೇಶಪ್ರೇಮಿ ಸೈನಿಕ, ಶಸ್ತ್ರಾಸ್ತ್ರ ಡೀಲರ್​ ಅನ್ನು ಎದುರುಗೊಂಡು ಅವನಿಂದ ಹತನಾಗಿ ನಂತರ ಅವನ ಮಗ ಆ ಶಸ್ತ್ರಾಸ್ತ್ರ ಡೀಲರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಕತೆಯನ್ನು ‘ಜವಾನ್’ ಸಿನಿಮಾ ಒಳಗೊಂಡಿರುವ ಸುಳಿವನ್ನು ಟ್ರೈಲರ್ ಬಿಟ್ಟುಕೊಟ್ಟಿದೆ. ‘ಜವಾನ್’ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸ್ವತಃ ಶಾರುಖ್ ಖಾನ್. ಸಿನಿಮಾ ಸೆಪ್ಟೆಂಬರ್ 7ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Thu, 31 August 23