ಶಿಲ್ಪಾ ಶೆಟ್ಟಿ ಮಾನಹಾನಿ ಪ್ರಕರಣ: ಹೈಕೋರ್ಟ್​ನಿಂದ ಮಹತ್ವದ ಆದೇಶ

| Updated By: ರಾಜೇಶ್ ದುಗ್ಗುಮನೆ

Updated on: Jul 30, 2021 | 6:17 PM

ಸೋಶಿಯಲ್​ ಮೀಡಿಯಾಗಳಾದ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಹಾಗೂ ಸುದ್ದಿ ಮಾಧ್ಯಮ ಸೇರಿ ಒಟ್ಟು 29 ಪ್ಲಾಟ್​ಫಾರ್ಮ್​ಗಳ ಹೆಸರನ್ನು ಶಿಲ್ಪಾ ಶೆಟ್ಟಿ ಉಲ್ಲೇಖ ಮಾಡಿದ್ದರು.

ಶಿಲ್ಪಾ ಶೆಟ್ಟಿ ಮಾನಹಾನಿ ಪ್ರಕರಣ: ಹೈಕೋರ್ಟ್​ನಿಂದ ಮಹತ್ವದ ಆದೇಶ
ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ದಂಪತಿ
Follow us on

ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಮಾನಹಾನಿ ಎನಿಸುವ ಕೆಲವು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾ ಹಾಗೂ ಮಾಧ್ಯಮಗಳಿಂದ ತೆಗೆದು ಹಾಕುವಂತೆ ಬಾಂಬೆ ಹೈಕೋರ್ಟ್​ ಆದೇಶ ಹೊರಡಿಸಿದೆ. ಶಿಲ್ಪಾ ಶೆಟ್ಟಿ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಂತರದಲ್ಲಿ ಕೋರ್ಟ್​ ಈ ಆದೇಶ ಹೊರಡಿಸಿದೆ.

ಸೋಶಿಯಲ್​ ಮೀಡಿಯಾಗಳಾದ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಹಾಗೂ ಸುದ್ದಿ ಮಾಧ್ಯಮ ಸೇರಿ ಒಟ್ಟು 29 ಪ್ಲಾಟ್​ಫಾರ್ಮ್​ಗಳ ಹೆಸರನ್ನು ಶಿಲ್ಪಾ ಶೆಟ್ಟಿ ಉಲ್ಲೇಖ ಮಾಡಿದ್ದರು. ಇವುಗಳಿಂದ ಮಾನ ಹಾನಿ ಉಂಟಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.

‘ಪತ್ರಿಕಾ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ನಡುವೆ ಸಮತೋಲನ ಇರಬೇಕು. ಈ ಹಂತದಲ್ಲಿ ಬರುವ ಎಲ್ಲಾ ಹೇಳಿಕೆಗಳು ಮಾನ ಹಾನಿ ಎಂದು ಹೇಳಲು ಸಾಧ್ಯವಿಲ್ಲ. ಅವುಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕಾಗುತ್ತದೆ.  ಪ್ರಾಥಮಿಕ ಹಂತದಲ್ಲಿ ಮಾನಹಾನಿ ಎನಿಸುವ ವಿಡಿಯೋಗಳನ್ನು ತೆಗೆಯಿರಿ’ ಎಂದು ಕೋರ್ಟ್​ ಆದೇಶಿಸಿದೆ.

‘ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು? ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದು ಅವರ ಜೀವನದ ಒಂದು ಭಾಗ. ಈ ಹಿಂದೆ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಹಲವು ತೀರ್ಪು ನೀಡಲಾಗಿತ್ತು. ಎಷ್ಟು ಬಾರಿ ಇದನ್ನೇ ಹೇಳಬೇಕು? ಪೊಲೀಸ್​ ಮೂಲಗಳು ಹೇಳಿವೆ ಎಂದು ವರದಿಯಾದರೆ ಅದು ಎಂದಿಗೂ ಮಾನಹಾನಿಯಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ?’ ಎಂದು ನ್ಯಾಯಮೂರ್ತಿ ಜಿಎಸ್​ ಪಟೇಲ್ ಅವರು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಆರಂಭದಲ್ಲಿ ಪ್ರಶ್ನೆ ಮಾಡಿದ್ದರು.

ಮಾಧ್ಯಮಗಳು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ  ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಖಾಸಗಿತನಕ್ಕೆ ಚ್ಯುತಿ ತರುತ್ತಿವೆ ಎಂದು ಕೋರ್ಟ್​ಗೆ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಶಿಲ್ಪಾ ಶೆಟ್ಟಿ ಉಲ್ಲೇಖ ಮಾಡಿದ್ದರು. ಅಲ್ಲದೆ, ತಮಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ 18 ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ:  ಆ ಆ್ಯಪ್​ ಬಗ್ಗೆ ನಂಗೆ ಗೊತ್ತಿಲ್ಲ, ಪತಿಯ ಉದ್ಯಮದಲ್ಲಿ ನಾನು ತಲೆ ಹಾಕಲ್ಲ; ಶಿಲ್ಪಾ ಶೆಟ್ಟಿ

Published On - 6:00 pm, Fri, 30 July 21