ಶಿಲ್ಪಾ ಶೆಟ್ಟಿಯ ರೆಸ್ಟೊರೆಂಟ್ನಲ್ಲಿ ಒಂದು ರಾತ್ರಿಗೆ ಆಗುವ ಬ್ಯುಸಿನೆಸ್ ಎಷ್ಟು ಕೋಟಿ ಗೊತ್ತೆ?
Shilpa Shetty: ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ದಶಕಗಳಿಂದಲೂ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ಶಿಲ್ಪಾ ಶೆಟ್ಟಿ ನಟಿಯಷ್ಟೆ ಅಲ್ಲ ಒಳ್ಳೆಯ ಉದ್ಯಮಿ ಸಹ. ಬ್ಯೂಟಿ ಬ್ರ್ಯಾಂಡ್, ರೆಸ್ಟೊರೆಂಟ್, ಫೈನ್ಯಾನ್ಸ್, ಆಭರಣ ಹಲವು ಉದ್ಯಮಗಳನ್ನು ಶಿಲ್ಪಾ ಹೊಂದಿದ್ದಾರೆ. ಅಂದಹಾಗೆ ಶಿಲ್ಪಾ ಅವರ ರೆಸ್ಟೊರೆಂಟ್ನಲ್ಲಿ ಒಂದು ರಾತ್ರಿಗೆ ಆಗುವ ಬ್ಯುಸಿನೆಸ್ ಎಷ್ಟು ಗೊತ್ತೆ?

ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ ದಶಕಗಳಿಂದಲೂ ಬಾಲಿವುಡ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಈಗಲೂ ಸಹ ರಿಯಾಲಿಟಿ ಶೋ, ಸಿನಿಮಾ, ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿಲ್ಪಾ ಶೆಟ್ಟಿ ನಟಿ ಮಾತ್ರವಲ್ಲ, ಯಶಸ್ವಿ ಉದ್ಯಮಿಯೂ ಹೌದು. ಆದರೆ ಅವರ ಉದ್ಯಮ ಆಗಾಗ್ಗೆ ಸುದ್ದಿಯಲ್ಲಿರುತ್ತದೆ, ಅದೂ ನೆಗೆಟಿವ್ ಕಾರಣಗಳಿಗಾಗಿ. ಇದೀಗ ಶಿಲ್ಪಾ ಶೆಟ್ಟಿಯ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ವಂಚನೆ ಪ್ರಕರಣ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಶಿಲ್ಪಾ ತಮ್ಮ ರೆಸ್ಟೊರೆಂಟ್ ಒಂದನ್ನು ಬಾಗಿಲು ಹಾಕಿದ್ದು ಸಹ ಸುದ್ದಿ ಆಗಿತ್ತು. ಆದರೆ ಶಿಲ್ಪಾಗೆ ಅದೊಂದೆ ರೆಸ್ಟೊರೆಂಟ್ ಇಲ್ಲ. ಶಿಲ್ಪಾರ ಮುಂಬೈನ ರೆಸ್ಟೊರೆಂಟ್ ಒಂದರಲ್ಲಿ ಪ್ರತಿ ದಿನ ಕೋಟ್ಯಂತರ ರೂಪಾಯಿ ವ್ಯವಾಹರ ಆಗುತ್ತದೆಯಂತೆ. ಇದನ್ನು ಸ್ವತಃ ಶಿಲ್ಪಾರ ಹತ್ತಿರದ ಪರಿಚಯವದವರೇ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿಗೆ ಸೇರಿದ ಬಾಸ್ಟಿಯನ್ ಮುಂಬೈನ ಪ್ರಮುಖ ಐಶಾರಾಮಿ ರೆಸ್ಟೊರೆಂಟ್ಗಳಲ್ಲಿ ಒಂದು. ಮುಂಬೈನ ಹೈ-ಫೈ ಜನರ ಬಲು ಮೆಚ್ಚಿನ ರೆಸ್ಟೊರೆಂಟ್ ಕಮ್ ಬಾರ್ ಇದಾಗಿದೆ. ಖ್ಯಾತ ಲೇಖಕಿ, ಪತ್ರಕರ್ತೆ ಹಾಗೂ ಬಾಲಿವುಡ್ಗೆ ಬಲು ಆಪ್ತವಾಗಿರುವ ಶೋಭಾ ಡೇ ಹೇಳಿರುವಂತೆ ಶಿಲ್ಪಾ ಶೆಟ್ಟಿ ಒಡೆತನದ ಬಾಸ್ಟಿಯನ್ನಲ್ಲಿ ಪ್ರತಿದಿನ ಎರಡರಿಂದ ಮೂರು ಕೋಟಿ ರೂಪಾಯಿಗಳ ವ್ಯಾಪಾರ ಆಗುತ್ತದೆಯಂತೆ. ಅಲ್ಲಿಗೆ ಬರುವ ಬಹುತೇಕರು ಲಕ್ಷಗಳ ಲೆಕ್ಕದಲ್ಲಿ ಬಿಲ್ ಪಾವತಿ ಮಾಡುತ್ತಾರಂತೆ.
ಸಂದರ್ಶನವೊಂದರಲ್ಲಿ ಮುಂಬೈನ ಆರ್ಥಿಕತೆ ಬಗ್ಗೆ ಮಾತನಾಡಿರುವ ಶೋಭಾ ಡೇ, ‘ಮುಂಬೈನಲ್ಲಿ ವಿಪರೀತ ದುಡ್ಡು ಆಯ-ವ್ಯಯ ಆಗುತ್ತಿದೆ. ಮುಂಬೈನ ರೆಸ್ಟೊರೆಂಟ್ ಒಂದರಲ್ಲಿ ಪ್ರತಿ ರಾತ್ರಿ 2 ರಿಂದ ಮೂರು ಕೋಟಿ ವ್ಯವಹಾರ ಆಗುತ್ತದೆ. ಆಪ್ತರು ಇದನ್ನು ಹೇಳಿದಾಗ ನನಗೆ ನಂಬಲು ಆಗಲಿಲ್ಲ. ಹಾಗಾಗಿ ಖುದ್ದಾಗಿ ನಾನೇ ಅಲ್ಲಿಗೆ ಹೋದೆ. ಖಂಡಿತವಾಗಿಯೂ ಅಲ್ಲಿ ಪ್ರತಿದಿನ 2 ರಿಂದ ಮೂರು ಕೋಟಿ ವ್ಯವಹಾರ ಆಗುತ್ತದೆ. ವೀಕೆಂಡ್ಗಳಲ್ಲಿ 3 ರಿಂದ ನಾಲ್ಕು ಕೋಟಿ ಮೌಲ್ಯದ ವ್ಯಾಪಾರ ಆಗುತ್ತದೆ’ ಎಂದಿದ್ದಾರೆ.
ಶೋಭಾ ಡೇ ಅವರ ಸಂದರ್ಶನ ಮಾಡುತ್ತಿದ್ದ ಬರ್ಖಾ ದತ್, ‘ಯಾವ ರೆಸ್ಟೊರೆಂಟ್ ಅದು?’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಶೋಭಾ ಡೇ, ‘ಬಾಸ್ಟಿಯನ್ ರೆಸ್ಟೊರೆಂಟ್. ಅದು ಟಾಪ್ ಫ್ಲೋರ್ನಲ್ಲಿದೆ. ಅಲ್ಲಿಗೆ ಹೋದರೆ ಯಾವುದೋ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ. ಮುಂಬೈನ 360 ಡಿಗ್ರಿ ವೀವ್ ಅಲ್ಲಿಂದ ಸಿಗುತ್ತದೆ. ಕಿನ್ನರ ಲೋಕದಂತೆ ಇದೆ ಆ ರೆಸ್ಟೊರೆಂಟ್. ಆ ರೆಸ್ಟೊರೆಂಟ್ನಲ್ಲಿ ಪ್ರತಿದಿನ ಸುಮಾರು 1400 ರಿಂದ 1500 ಜನ ಸೇವೆ ಪಡೆಯುತ್ತಾರೆ’ ಎಂದಿದ್ದಾರೆ.
ಅಲ್ಲಿನ ತಮ್ಮ ಅನುಭವದ ಬಗ್ಗೆಯೂ ಮಾತನಾಡಿರುವ ಶೋಭಾ ಡೇ, ‘ಅಲ್ಲಿನ ಸೀಟುಗಳು ಸದಾ ತುಂಬಿರುತ್ತವೆ. ಬಾಂದ್ರಾನಲ್ಲಿ ಆ ರೆಸ್ಟೊರೆಂಟ್ ಇದ್ದು, ಸೀಟಿಗಾಗಿ ಜನ ರೆಸ್ಟೊರೆಂಟ್ನ ಕೆಳಗೆ ಪಾರ್ಕಿಂಗ್ ಲಾಟ್ನಲ್ಲಿ ಕಾಯುತ್ತಿರುತ್ತಾರೆ. ಅಲ್ಲಿಗೆ ಬರುವ ಗ್ರಾಹಕರು, ಲ್ಯಾಂಬೊರ್ಗಿನಿ, ಆಸ್ಟನ್ ಮಾರ್ಟಿನ್ ಕಾರುಗಳಲ್ಲಿ ಬರುತ್ತಾರೆ. ನಾನು ಅಲ್ಲಿಗೆ ಹೋದಾಗ ಬಹುತೇಕ ಎಲ್ಲರೂ ಯುವಕ-ಯುವತಿಯರೇ ಇದ್ದರು. ನಾನು ಎಂದೂ ನೋಡಿ, ಕೇಳಿರದ ಹೈ ಎಂಡ್ ಮದ್ಯದ ಬಾಟಲಿಗಳು ಅವರ ಟೇಬಲ್ಗಳ ಮೇಲಿದ್ದವು. ಪ್ರತಿ ಟೇಬಲ್ಗಳು ಲಕ್ಷಗಳ ಲೆಕ್ಕದಲ್ಲಿ ಬಿಲ್ ಪಾವತಿ ಮಾಡುತ್ತಿದ್ದವು. ಅವರಲ್ಲಿ ಒಬ್ಬರೂ ಸಹ ನನ್ನ ಪರಿಚಯದವರು ಇರಲಿಲ್ಲ. ಎಲ್ಲರೂ ಹೊಸಬರೆ. ಅವರೆಲ್ಲ ಯಾರು? ಎಲ್ಲಿಂದ ಬಂದವರು ನನಗೆ ತಿಳಿಯಲಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಾಸ್ಟಿಯನ್ ಶಿಲ್ಪಾ ಶೆಟ್ಟಿ ಅವರ ಸಹ ಒಡೆತನದ ರೆಸ್ಟೊರೆಂಟ್. 2019 ರಲ್ಲಿ ರಂಜಿತ್ ಬಿಂದ್ರಾ ಅವರೊಟ್ಟಿಗೆ ಸೇರಿ ಈ ರೆಸ್ಟೊರೆಂಟ್ ಚೈನ್ ಆರಂಭಿಸಿದ್ದಾರೆ. ಬಾಸ್ಟಿಯನ್ ರೆಸ್ಟೊರೆಂಟ್ ಉದ್ಯಮದಲ್ಲಿ ಶಿಲ್ಪಾ ಅವರಿಗೆ 50% ಪಾಲುದಾರಿಕೆ ಇದೆ. ಮುಂಬೈ ಮಾತ್ರವಲ್ಲದೆ ದೇಶದ ಇನ್ನೂ ಕೆಲವೆಡೆ ಬಾಸ್ಟಿಯನ್ ರೆಸ್ಟೊರೆಂಟ್ಗಳು ಇವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




