
ಅಕ್ಷಯ್ ಕುಮಾರ್ ಅವರ ಕೈಯಲ್ಲಿ ಈ ವರ್ಷ ಬರೋಬ್ಬರಿ 12 ಸಿನಿಮಾಗಳು ಇವೆ. ಈ ಪೈಕಿ 2 ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಉಳಿದ 10 ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರು ನಿತ್ಯ 8 ಗಂಟೆ ಮಾತ್ರ ಕೆಲಸ ಮಾಡೋದು. ಉಳಿದ ಸಮಯವನ್ನು ಅವರು ಕುಟುಂಬಕ್ಕೆ ಹಾಗೂ ವೈಯಕ್ತಿಕವಾಗಿ ನೀಡಲು ಬಯಸುತ್ತಾರೆ. ಅಕ್ಷಯ್ ಕುಮಾರ್ ಅವರು ಈ ರೀತಿ ಸಾಲು ಸಾಲು ಸಿನಿಮಾ ಒಪ್ಪಿಕೊಳ್ಳುತ್ತಿರುವುದೇ ಸೋಲಿಗೆ ಕಾರಣ ಎಂದು ಅನೇಕರು ಹೇಳಿದ್ದಾರೆ. ಅದಕ್ಕೆಲ್ಲ ಅಕ್ಷಯ್ ಕುಮಾರ್ ಉತ್ತರ ನೀಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್, ‘ರಕ್ಷಾ ಬಂಧನ್’, ‘ರಾಮ್ ಸೇತು’, ‘ಸೆಲ್ಫಿ’, ‘ಮಿಷನ್ ರಾಣಿಗಂಜ್’, ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸೇರಿ ಅನೇಕ ಸಿನಿಮಾಗಳು ಸೋತಿವೆ. ಆದಾಗ್ಯೂ ಅಕ್ಷಯ್ ಸಿನಿಮಾ ಮಾಡೋದನ್ನು ನಿಲ್ಲಿಸಿಲ್ಲ. ಈ ಬಗ್ಗೆ ಟೀಕಿಸಿದವರಿಗೆ ಅಕ್ಷಯ್ ತಿರುಗೇಟು ಕೊಟ್ಟಿದ್ದಾರೆ.
‘ಅಕ್ಷಯ್ ವರ್ಷಕ್ಕೆ ನಾಲ್ಕು ಸಿನಿಮಾಗಳನ್ನು ಏಕೆ ಮಾಡುತ್ತಾರೆ, ವರ್ಷಕ್ಕೆ ಒಂದೇ ಸಿನಿಮಾ ಮಾಡಬೇಕು ಎಂದು ಕೆಲವರು ಹೇಳುತ್ತಾರೆ. ಆಯಿತು ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತೇನೆ, ಉಳಿದ ಸಮಯದಲ್ಲಿ ನಾನೇನು ಮಾಡಬೇಕು? ನಿಮ್ಮ ಮನೆಗೆ ಬರಬೇಕಾ? ಯಾರಿಗೆ ಕೆಲಸ ಸಿಗುತ್ತದೆಯೋ ಅವರೇ ಅದೃಷ್ಟವಂತರು. ಎಲ್ಲರೂ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗುತ್ತಿದೆ, ಹೀಗಾಗುತ್ತಿದೆ ಎನ್ನುತ್ತಾರೆ. ಯಾರಿಗೋ ಕೆಲಸ ಸಿಗುತ್ತಿದೆ ಎಂದರೆ ಮಾಡಲಿ ಬಿಡಿ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ವಿಧಿ ಬದಲಿಸಲು ಸಾಧ್ಯವಿಲ್ಲ’; ಸಿನಿಮಾ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಬೇಸರದ ಮಾತು
ಅಕ್ಷಯ್ ಕುಮಾರ್ ಅವರು ಪ್ರತಿ ಚಿತ್ರಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಸೋಲುತ್ತದೆ ಎನ್ನುವ ಭಯ ಇದ್ದರೂ ನಿರ್ಮಾಪಕರು ಇಷ್ಟು ಮೊತ್ತದ ಹಣ ಕೊಡಲು ರೆಡಿ ಆಗಿರುತ್ತಾರೆ. ಉಳಿದ ಖರ್ಚುಗಳನ್ನು ಸೇರಿಸಿದರೆ ಸಿನಿಮಾದ ಖರ್ಚು 100 ಕೋಟಿ ರೂಪಾಯಿ ಆಗುತ್ತದೆ. ಆದರೆ, ಅಕ್ಷಯ್ ಸಿನಿಮಾಗಳು ಇತ್ತೀಚೆಗೆ ಗಳಿಕೆ ಮಾಡುತ್ತಿರುವುದು ಕೇವಲ 20-50 ಕೋಟಿ ರೂಪಾಯಿ ಮಾತ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.