ನಟಿ ಶ್ರದ್ಧಾ ಕಪೂರ್ ಅವರು ‘ಸ್ತ್ರೀ 2’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ವಿಚಾರಗಳಿಂದಲೂ ಶ್ರದ್ಧಾ ಕಪೂರ್ ಅವರು ಆಗಾಗ ಸುದ್ದಿ ಆಗುತ್ತಾರೆ. ಚಿತ್ರರಂಗದಲ್ಲಿ ಸಹ-ನಿರ್ದೇಶಕನಾಗಿ ಗುರುತಿಸಿಕೊಂಡ ರಾಹುಲ್ ಮೋದಿ ಜೊತೆ ಶ್ರದ್ಧಾ ಕಪೂರ್ ಡೇಟಿಂಗ್ ಮಾಡುತ್ತಿದ್ದರು. ಆ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಈಗ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ನಡುವೆ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಬ್ಬರು ಬಹಿರಂಗವಾಗಿ ಮಾತನಾಡಿಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿ ಸಾಕ್ಷಿ ಸಿಕ್ಕಿದೆ.
2023ರಲ್ಲಿ ಶ್ರದ್ಧಾ ಕಪೂರ್ ಹಾಗೂ ರಾಹುಲ್ ಮೋದಿ ಅವರು ಬಹಳ ಆಪ್ತವಾಗಿದ್ದರು. ತಮ್ಮಿಬ್ಬರ ಸೆಲ್ಫಿಯನ್ನು ಶ್ರದ್ಧಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಖಚಿತ ಆಗಿತ್ತು. ಕೆಲವು ಸಂದರ್ಭದಲ್ಲಿ ಶ್ರದ್ಧಾ ಕಪೂರ್ ಅವರು ರಾಹುಲ್ ಮೋದಿ ಜೊತೆ ಕಾಣಿಸಿಕೊಂಡಿದ್ದರು. ಆದರೆ ಈಗ ಅವರ ಸಂಬಂಧದಲ್ಲಿ ಬಿರುಕು ಮೂಡಿದಂತಿದೆ.
ಸೆಲೆಬ್ರಿಟಿಗಳ ಎಲ್ಲ ಚಲನವಲನಗಳನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಶ್ರದ್ಧಾ ಕಪೂರ್ ಅವರು ಇನ್ಸ್ಟಾಗ್ರಾಮ್ನಲ್ಲಿ ರಾಹುಲ್ ಮೋದಿಯವರನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೇ, ರಾಹುಲ್ ಮೋದಿಯ ಪ್ರೊಡಕ್ಷನ್ ಹೌಸ್, ಆತ್ಮೀಯರು ಹಾಗೂ ಮುದ್ದಿನ ಶ್ವಾನದ ಪೇಜ್ಗಳನ್ನೂ ಕೂಡ ಶ್ರದ್ಧಾ ಕಪೂರ್ ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಬ್ರೇಕಪ್ ಕಾರಣದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎಂಬುದು ನೆಟ್ಟಿಗರ ವಾದ.
ಇದನ್ನೂ ಓದಿ: ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್
ಸಿನಿಮಾ ಬಗ್ಗೆ ಮಾತನಾಡುವುದಾದರೆ, ಶ್ರದ್ಧಾ ಕಫೂರ್ ಅಭಿನಯದ ‘ಸ್ತ್ರೀ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದಲ್ಲಿ ಹಾರರ್ ಕಹಾನಿ ಇದೆ. ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ, ತಮನ್ನಾ ಭಾಟಿಯಾ ಮುಂತಾದ ಜನಪ್ರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಕ್ರೇಜ್ ಸೃಷ್ಟಿ ಮಾಡಿವೆ. ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದರಿಂದ ಶ್ರದ್ಧಾ ಕಪೂರ್ ಅವರ ವೃತ್ತಿಜೀವನಕ್ಕೆ ಹೊಸ ಮೆರುಗು ಸಿಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.