ವಿಶ್ವಾದ್ಯಂತ 560 ಕೋಟಿ ರೂಪಾಯಿ ಗಳಿಸಿದ ‘ಸ್ತ್ರೀ 2’ ಸಿನಿಮಾ; ಭಾರತದಲ್ಲಿ ಆದ ಕಮಾಯಿ ಎಷ್ಟು?

ಅಮರ್​ ಕೌಶಿಕ್​ ನಿರ್ದೇಶನ ಮಾಡಿದ ‘ಸ್ತ್ರೀ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಬಿಡುಗಡೆಯಾಗಿ 12 ದಿನ ಕಳೆದಿದ್ದು, ಇನ್ನೂ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅಂತಿಮವಾಗಿ ಈ ಸಿನಿಮಾಗೆ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿಯಾಗಿದೆ. ಶ್ರದ್ಧಾ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ ಈ ಚಿತ್ರದ ಕಲೆಕ್ಷನ್ ರಿಪೋರ್ಟ್​ ಇಲ್ಲಿದೆ..

ವಿಶ್ವಾದ್ಯಂತ 560 ಕೋಟಿ ರೂಪಾಯಿ ಗಳಿಸಿದ ‘ಸ್ತ್ರೀ 2’ ಸಿನಿಮಾ; ಭಾರತದಲ್ಲಿ ಆದ ಕಮಾಯಿ ಎಷ್ಟು?
‘ಸ್ತ್ರೀ 2’ ಸಿನಿಮಾ ಪೋಸ್ಟರ್​

Updated on: Aug 26, 2024 | 8:58 PM

ರಾಜ್​ಕುಮಾರ್​ ರಾವ್​, ಶ್ರದ್ಧಾ ಕಪೂರ್​ ನಟನೆಯ ‘ಸ್ತ್ರೀ 2’ ಸಿನಿಮಾ ಗೆಲ್ಲುತ್ತದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಯಾಕೆಂದರೆ ಆ ಸಿನಿಮಾದ ಮೇಲೆ ಜನರಿಗೆ ನಿರೀಕ್ಷೆ ಇತ್ತು. ಆದರೆ ಸ್ಟಾರ್​ ನಟರ ಸಿನಿಮಾಗಳನ್ನೂ ಮೀರಿಸುವ ರೀತಿಯಲ್ಲಿ ಕಲೆಕ್ಷನ್​ ಮಾಡಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ‘ಸ್ತ್ರೀ 2’ ಸಿನಿಮಾ ಬಿಡುಗಡೆಯಾಗಿ 12 ದಿನ ಕಳೆದಿದೆ. ಈ ಚಿತ್ರಕ್ಕೆ ವಿಶ್ವಾದ್ಯಂತ ಬರೋಬ್ಬರಿ 560 ಕೋಟಿ ರೂಪಾಯಿ ಕಮಾಯಿ ಆಗಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ 402 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ಶ್ರದ್ಧಾ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

‘ಸ್ತ್ರೀ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್​ ಅವರಿಗೆ ಪ್ರಮುಖ ಪಾತ್ರವಿದೆ. ಹಾಗೆಯೇ ರಾಜ್​ಕುಮಾರ್ ರಾವ್​, ಪಂಕಜ್​ ತ್ರಿಪಾಠಿ, ಅಭಿಷೇಕ್​ ಬ್ಯಾನರ್ಜಿ ಮುಂತಾದವರು ನಟಿಸಿದ್ದಾರೆ. ತಮನ್ನಾ ಭಾಟಿಯಾ, ವರುಣ್​ ಧವನ್​ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಕಲಾವಿದರಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಸಖತ್​ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಶಾರುಖ್​, ಸಲ್ಮಾನ್​, ಆಮಿರ್​ ಜೊತೆ ಯಾಕೆ ನಟಿಸಿಲ್ಲ? ಅಸಲಿ ಕಾರಣ ತಿಳಿಸಿದ ಶ್ರದ್ಧಾ ಕಪೂರ್​

ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ (ಆಗಸ್ಟ್​ 15) ‘ಸ್ತ್ರೀ 2’ ಸಿನಿಮಾಗೆ ಬರೋಬ್ಬರಿ 55.40 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಇದು ಸಣ್ಣ ಮೊತ್ತವಲ್ಲ. ಪ್ರತಿ ದಿನವೂ ಈ ಸಿನಿಮಾ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಾ ಮುನ್ನುಗ್ಗಿತು. ರಿಲೀಸ್​ಗೂ ಮುನ್ನ ಪೇಯ್ಡ್​ ಪ್ರೀಮಿಯರ್ ಮಾಡಿದ್ದಾಗಲೇ 9.40 ಕೋಟಿ ರೂಪಾಯಿ ಆದಾಯ ಬಂದಿತ್ತು. ಭಾರತದಲ್ಲಿ 11 ದಿನಗಳಿಗೆ ಈ ಸಿನಿಮಾದ ಒಟ್ಟು ಕಲೆಕ್ಷನ್​ 402 ಕೋಟಿ ರೂಪಾಯಿ ಆಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನಟಿ ಶ್ರದ್ಧಾ ಕಪೂರ್​ ಅವರು ‘ಸ್ತ್ರೀ 2’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಮುಖ್ಯ ಭೂಮಿಕೆ ನಿಭಾಯಿಸಿದ ಸಿನಿಮಾ ಈ ಪರಿ ಅಬ್ಬರಿಸುತ್ತಿರುವುದಕ್ಕೆ ಅವರಿಗೆ ಖುಷಿ ಆಗಿದೆ. ಈ ಅಭೂತಪೂರ್ವ ಗೆಲುವಿಗಾಗಿ ಎಲ್ಲರೂ ಶ್ರದ್ಧಾ ಕಪೂರ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಹಾರರ್​ ಸಿನಿಮಾದಲ್ಲಿ ಶ್ರದ್ಧಾ ಅವರನ್ನು ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ಖೇಲ್​ ಖೇಲ್​ ಮೇ’, ಜಾನ್​ ಅಬ್ರಾಹಂ ಅಭಿನಯದ ‘ವೇದಾ’ ಸಿನಿಮಾಗಳಿಗೆ ಪೈಪೋಟಿ ನೀಡಿ ‘ಸ್ತ್ರೀ 2’ ಚಿತ್ರ ಗೆದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.