ಗಾಯಕಿ, ನಟಿ ಮಲ್ಲಿಕಾ ರಜಪೂತ್ ಅನುಮಾನಸ್ಪದ ಸಾವು

Mallika Rajput: ನಟಿ, ಗಾಯಕಿ ಮಲ್ಲಿಕಾ ರಜಪೂತ್ ಅಲಿಯಾಸ್ ವಿಜಯಲಕ್ಷ್ಮಿ ಅನುಮಾನಸ್ಪದವಾಗಿ ನಿಧನ ಹೊಂದಿದ್ದಾರೆ. ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ನಟಿಸಿದ್ದ ಮಲ್ಲಿಕಾ ಅವರಿಗೆ 35 ವರ್ಷ ವಯಸ್ಸಾಗಿತ್ತು.

ಗಾಯಕಿ, ನಟಿ ಮಲ್ಲಿಕಾ ರಜಪೂತ್ ಅನುಮಾನಸ್ಪದ ಸಾವು

Updated on: Feb 13, 2024 | 10:59 PM

ನಟಿ, ಗಾಯಕಿ ಮಲ್ಲಿಕಾ ರಜಪೂತ್ (Mallika Rajput) (ವಿಜಯಲಕ್ಷ್ಮಿ) ನಿಧನ ಹೊಂದಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಉತ್ತರ ಪ್ರದೇಶದ ಸುಲ್ತಾನಪುರದ ಮಲ್ಲಿಕಾರ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮಲ್ಲಿಕಾರ ತಾಯಿ, ‘ಮಗಳು ಆರಾಮವಾಗಿಯೇ ಇದ್ದಳು, ಇಂದು ಬೆಳಿಗ್ಗೆ ಎದ್ದಾಗ ಆಕೆಯ ಕೋಣೆಯ ಬಾಗಿಲು ಹಾಕಿತ್ತು, ಲೈಟ್ ಆನ್ ಆಗಿತ್ತು. ಬಾಗಿಲು ತಟ್ಟಿದಾಗ ತೆಗೆಯಲಿಲ್ಲ, ನಾನು ಕಿಟಕಿಯಿಂದ ನೋಡಿದಾಗ ಮಗಳು ನಿಂತಿರುವಂತೆ ಕಂಡಿತು. ಬಳಿಕ ಆಕೆಯ ತಂದೆಯನ್ನು ಇನ್ನಿತರರನ್ನು ಕರೆಸಿ ಕದ ಒಡೆಸಿದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು’ ಎಂದಿದ್ದಾರೆ.

ಇದನ್ನೂ ಓದಿ:ಕನ್ನಡದ ಹಾಡು ಹಾಡಿ ಮೆಚ್ಚುಗೆ ಪಡೆದ ಗಾಯಕಿ ಶಿವಶ್ರೀ

ಮಲ್ಲಿಕಾ ರಜಪೂತ್, ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ಕಂಗನಾ ರಣೌತ್ ಜೊತೆ ನಟಿಸಿದ್ದರು. ಗಾಯಕಿಯೂ ಆಗಿದ್ದ ಮಲ್ಲಿಕಾ ಶಾನ್​ರ ಆಲ್ಬಂನಲ್ಲಿ ಹಾಡಿದ್ದರು, ನಟಿಸಿದ್ದರು ಸಹ. ಕಥಕ್ ನೃತ್ಯಗಾರ್ತಿಯೂ ಆಗಿದ್ದ ಮಲ್ಲಿಕಾ ನೃತ್ಯ ಪ್ರದರ್ಶನಗಳನ್ನು ಸಹ ನೀಡಿದ್ದಾರೆ. ರಾಜಕೀಯದಲ್ಲಿಯೂ ಆಸಕ್ತಿ ಇರಿಸಿಕೊಂಡಿದ್ದ ಮಲ್ಲಿಕಾ 2022ರಲ್ಲಿ ಉತ್ತರ ಪ್ರದೇಶ ಬಿಜೆಪಿ ಸೇರ್ಪಡೆಗೊಂಡಿದ್ದರು, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನವನ್ನು ಸಹ ಅವರಿಗೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿಯಿಂದ ದೂರ ಉಳಿದಿದ್ದ ಮಲ್ಲಿಕಾ ಅಧ್ಯಾತ್ಮದ ಕಡೆಗೆ ಹೊರಳಿದ್ದರು.

ಕೋಟ್ವಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಠಾಣೆಯ ಮುಖ್ಯಸ್ಥರು ಹೇಳಿರುವಂತೆ, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂಬಂತೆ ಕಾಣುತ್ತಿದೆ. ಆದರೆ ಪೂರ್ಣ ತನಿಖೆಯ ಬಳಿಕವಷ್ಟೆ ನಿಧನಕ್ಕೆ ನಿಖರ ಕಾರಣ ತಿಳಿಯಲಿದೆ. ಮಲ್ಲಿಕಾರ ಆತ್ಮೀಯರು, ಕುಟುಂಬದವರ ವಿಚಾರಣೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುತ್ತದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ