ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ನಿಧನ ಹೊಂದಿ ಇಂದಿಗೆ (ಮೇ 31) ಒಂದು ವರ್ಷ (KK Death Anniversary). ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗ ಕೆಕೆ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹೃದಯಾಘಾತದಿಂದ ಕೆಕೆ ನಿಧನ ಹೊಂದಿದರು. ಈ ದಿನವನ್ನು ಅವರ ಅಭಿಮಾನಿಗಳು, ಕುಟುಂಬದವರು ನೆನಪಿಸಿಕೊಳ್ಳುತ್ತಿದ್ದಾರೆ. ಕೆಕೆ ಗೀತೆಗಳನ್ನು ನೆನಪಿಸಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸುವ ಕೆಲಸ ಆಗುತ್ತಿದೆ.
ಕೆಕೆ ಅವರು 2022ರ ಮೇ 31ರಂದು ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹಾಡುತ್ತಿದ್ದರು. ಹಾಡುತ್ತಿರುವಾಗಲೇ ಅವರಿಗೆ ಅತೀವ ಸುಸ್ತು ಕಾಣಿಸಿಕೊಂಡಿತು. ವೇದಿಕೆ ಇಳಿದ ಅವರು ನೇರವಾಗಿ ಹೋಟೆಲ್ ತೆರಳಿದರು. ಅಲ್ಲಿಂದ ಆಸ್ಪತ್ರೆಗೆ ಹೊರಟರು. ಮಾರ್ಗಮಧ್ಯೆ ಅವರಿಗೆ ಹೃದಯಾಘಾತ ಉಂಟಾಗಿದ್ದರಿಂದ ಮೃತಪಟ್ಟರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದರು.
ಇದನ್ನೂ ಓದಿ: Singer KK Death: ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ನಂತರ 53 ವರ್ಷದ ಗಾಯಕ ಕೆಕೆ ಕುಸಿದು ಬಿದ್ದು ಸಾವು
ಕೆಕೆ ಸಾವಿಗೆ ಹೃದಯಾಘಾತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ. ಕೆಕೆ ಕೊಠಡಿಯಲ್ಲಿ 10 ರೀತಿಯ ಔಷಧಗಳು ಸಿಕ್ಕಿದ್ದವು. ಪಿತ್ತ ಕಡಿಮೆ ಮಾಡುವ ಮಾತ್ರೆ, ವಿಟಾಮಿನ್ ಸಿ ಮಾತ್ರೆ, ಆಯುರ್ವೇದಿಕ್ ಔಷಧಗಳು ದೊರೆತಿದ್ದವು.
ಮೇ 31ರ ಬೆಳಗ್ಗೆಯೇ ಕೆಕೆ ಅವರಿಗೆ ಯಾವುದೂ ಸರಿ ಇಲ್ಲ ಎನಿಸುತ್ತಿತ್ತು. ಈ ವಿಚಾರವನ್ನು ಅವರು ಮ್ಯಾನೇಜರ್ ಬಳಿಯೂ ಹೇಳಿಕೊಂಡಿದ್ದರು. ಪತ್ನಿಗೆ ಕರೆ ಮಾಡಿದಾಗ ಎಡ ಭುಜ ನೋಯುತ್ತಿದೆ ಎಂದಿದ್ದರು. ಇದು ಹೃದಯಾಘಾತದ ಮುನ್ಸೂಚನೆ ಎಂಬುದು ವೈದ್ಯರ ಅಭಿಪ್ರಾಯ. ಆದರೆ, ಇದನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೇದಿಕೆ ಮೇಲೆ ಹಾಡುತ್ತಿದ್ದಾಗ ಕೆಕೆ ಅವರ ಮುಖದಿಂದ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು. ಇದನ್ನು ನಿರ್ಲಕ್ಷ್ಯ ಮಾಡಲಾಯಿತು. ಹಾಡಲು ಸಾಧ್ಯವಾಗದೆ ಹೊರಟಾಗ ಅವರು ಆಸ್ಪತ್ರೆಗೆ ತೆರಳುವ ಬದಲು ಹೋಟೆಲ್ಗೆ ಹೋಗಿದ್ದರು. ಇದು ಕೂಡ ಅವರ ಪ್ರಾಣಕ್ಕೆ ಕುತ್ತಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ