Aamir Khan: ಎಲ್ಲರ ಎದುರು ಆಮಿರ್ ಖಾನ್ ಕಾಲಿಗೆ ನಮಸ್ಕರಿಸಿದ ಕಪಿಲ್ ಶರ್ಮಾ; ಇಬ್ಬರ ನಡುವಿನ ಒಡನಾಟ ಹೇಗಿದೆ?
Kapil Sharma: ಪಂಜಾಬಿ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಹಾಜರಿ ಹಾಕಿದ್ದರು. ಅದೇ ಕಾರ್ಯಕ್ರಮಕ್ಕೆ ಹಾಸ್ಯ ನಟ, ನಿರೂಪಕ ಕಪಿಲ್ ಶರ್ಮಾ ಕೂಡ ಬಂದಿದ್ದರು.
ನಟ ಆಮಿರ್ ಖಾನ್ (Aamir Khan) ಅವರು ಈಗ ಸಿನಿಮಾ ಕೆಲಸಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ನಂತರ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹಾಗಂತ ಅವರು ಚಿತ್ರರಂಗದಿಂದ ದೂರ ಹೋಗಿಲ್ಲ. ಹೊಸಬರಿಗೆ ಸಪೂರ್ಟ್ ಮಾಡುವ ಕೆಲಸವನ್ನು ಆಮಿರ್ ಖಾನ್ ಮುಂದುವರಿಸಿದ್ದಾರೆ. ಇತ್ತೀಚೆಗೆ ‘ಕ್ಯಾರಿ ಆನ್ ಜಟ್ಟಾ 3’ (Carry On Jatta 3) ಪಂಜಾಬಿ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಅವರು ಹಾಜರಿ ಹಾಕಿದ್ದರು. ಅದೇ ಕಾರ್ಯಕ್ರಮಕ್ಕೆ ಹಾಸ್ಯ ನಟ, ನಿರೂಪಕ ಕಪಿಲ್ ಶರ್ಮಾ (Kapil Sharma) ಕೂಡ ಬಂದಿದ್ದರು. ಆಮಿರ್ ಖಾನ್ ಕಾಲಿಗೆ ಕಪಿಲ್ ಶರ್ಮಾ ನಮಸ್ಕರಿಸಿದರು. ವೇದಿಕೆ ಮೇಲೆ ಇಬ್ಬರೂ ಪರಸ್ಪರರ ಬಗ್ಗೆ ಮಾತನಾಡಿದರು.
ಕಪಿಲ್ ಶರ್ಮಾಗೆ ಆಮಿರ್ ಖಾನ್ ಫ್ಯಾನ್ ಆಗಿದ್ದಾರೆ. ಆ ಬಗ್ಗೆ ಅವರು ವೇದಿಕೆಯಲ್ಲಿ ಹೇಳಿದ್ದಾರೆ. ‘ನಾನು ಇತ್ತೀಚೆಗೆ ಹೆಚ್ಚು ಕೆಲಸ ಮಾಡುತ್ತಿಲ್ಲ. ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದೇನೆ. ಪ್ರತಿ ರಾತ್ರಿ ಮಲಗುವುದಕ್ಕೂ ಮುನ್ನ ಕಾಮಿಡಿ ವಿಡಿಯೋ ನೋಡುತ್ತೇನೆ. ಕಳೆದ ಕೆಲವು ತಿಂಗಳಿನಿಂದ ಕಪಿಲ್ ಶರ್ಮಾ ಅವರ ಶೋ ನೋಡುತ್ತಿದ್ದೇನೆ. ನಾನು ಅವರಿಗೆ ಅಭಿಮಾನಿ ಆಗಿದ್ದೇನೆ. ನೀವು ಗಮನಿಸಿರಬಹುದು ಅವರು ವೇದಿಕೆಗೆ ಬಂದಾಗ ನನ್ನ ನಗು ಹಿರಿದಾಯಿತು. ನನ್ನ ಅನೇಕ ಸಂಜೆಗಳನ್ನು ಅವರು ಕಲರ್ಫುಲ್ ಆಗಿಸಿದ್ದಾರೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
View this post on Instagram
‘ದಿ ಕಪಿಲ್ ಶರ್ಮಾ ಶೋ’ಗೆ ತಮ್ಮನ್ನು ಕರೆದಿಲ್ಲ ಎಂದು ಆಮಿರ್ ಖಾನ್ ಕ್ಯಾತೆ ತೆಗೆದರು. ಆಗ ವೇದಿಕೆ ಮೇಲಿದ್ದ ಎಲ್ಲರೂ ಜೋರಾಗಿ ನಕ್ಕರು. ‘ನಾನು ಅನೇಕ ಬಾರಿ ಅವರನ್ನು ಆಹ್ವಾನಿಸಿದ್ದೆ. ಆದರೆ ಅವರೇ ಬರಲಿಲ್ಲ’ ಎಂದು ಕಪಿಲ್ ಶರ್ಮಾ ಹೇಳಿದರು. ಅಲ್ಲದೇ, ‘ನೀವು ನಮ್ಮ ಶೋಗೆ ಬಂದರೆ ಅದು ನಮ್ಮ ಸೌಭಾಗ್ಯ’ ಎಂದು ಹೇಳಿದರು. ಶೀಘ್ರದಲ್ಲೇ ಕಪಿಲ್ ಶರ್ಮಾ ಶೋಗೆ ಆಮಿರ್ ಖಾನ್ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: Aamir Khan: ‘ಮಗಳ ವಯಸ್ಸಿನ ಫಾತಿಮಾ ಜತೆ ಆಮಿರ್ ಖಾನ್ ಮದುವೆ ಆಗ್ತಾರೆ’; ಬ್ರೇಕಿಂಗ್ ನ್ಯೂಸ್ ನೀಡಿದ ಕೆಆರ್ಕೆ
ವೈಯಕ್ತಿಕ ಕಾರಣದಿಂದಲೂ ಅಮಿರ್ ಖಾನ್ ಆಗಾಗ ಸುದ್ದಿ ಆಗುತ್ತಾರೆ. ಅವರು ಕಿರಣ್ ರಾವ್ ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ. ಆ ಗುಮಾನಿ ಹೆಚ್ಚಾಗುವ ರೀತಿಯಲ್ಲಿ ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು. ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಒಟ್ಟಾಗಿ ಆಟ ಆಡಿದ್ದರು. ಆ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.