ಸಂಜಯ್​ ದತ್​ ಅಪರಾಧ ಹಿನ್ನೆಲೆಯಿಂದ ಚಿತ್ರತಂಡಕ್ಕೆ ತೊಂದರೆ; ನಟನಿಗೆ ಗೇಟ್​ ಪಾಸ್​?

|

Updated on: Aug 06, 2024 | 5:10 PM

ನಟ ಸಂಜಯ್​ ದತ್​ ಅವರು ಜೈಲು ಶಿಕ್ಷೆ ಅನುಭವಿಸಿ ಬಂದಿದ್ದು ಗೊತ್ತೇ ಇದೆ. ಇದರಿಂದ ಅವರಿಗೆ ಈಗಲೂ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ಯುನೈಟೆಡ್​ ಕಿಂಗ್​ಡಮ್​ಗೆ ತೆರಳಲು ಸಂಜಯ್​ ದತ್​ ಅವರಿಗೆ ವೀಸಾ ಸಿಕ್ಕಿಲ್ಲ. ಇದರಿಂದ ‘ಸನ್​ ಆಫ್​ ಸರ್ದಾರ್​ 2’ ಚಿತ್ರತಂಡದವರಿಗೆ ತಲೆಬಿಸಿ ಉಂಟಾಗಿದೆ. ಹಾಗಾಗಿ ಪಾತ್ರವರ್ಗದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಮಾತು ಕೇಳಿಬಂದಿದೆ.

ಸಂಜಯ್​ ದತ್​ ಅಪರಾಧ ಹಿನ್ನೆಲೆಯಿಂದ ಚಿತ್ರತಂಡಕ್ಕೆ ತೊಂದರೆ; ನಟನಿಗೆ ಗೇಟ್​ ಪಾಸ್​?
ಸಂಜಯ್​ ದತ್​
Follow us on

ವೈಯಕ್ತಿಕ ಜೀವನದಲ್ಲಿ ಹಾಗೂ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡವರು ನಟ ಸಂಜಯ್​ ದತ್​. ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ವಿಲನ್​, ಹೀರೋ, ಅತಿಥಿ ಪಾತ್ರ.. ಹೀಗೆ ಎಲ್ಲ ರೀತಿಯಲ್ಲೂ ಸಂಜಯ್​ ದತ್​ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ ಎಂಬುದು ನಿಜ. ಆದರೆ ಅವರಿಗೆ ಅಪರಾಧ ಹಿನ್ನೆಲೆ ಇರುವ ಕಾರಣದಿಂದ ‘ಸನ್​ ಆಫ್ ಸರ್ದಾರ್​ 2’ ಚಿತ್ರದಿಂದ ಅವರಿಗೆ ಗೇಟ್​ಪಾಸ್​ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.

ಅಜಯ್​ ದೇವಗನ್​ ಮತ್ತು ಸಂಜಯ್​ ದತ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ ‘ಸನ್​ ಆಫ್​ ಸರ್ದಾರ್​’ ಸಿನಿಮಾ 2012ರಲ್ಲಿ ಬಿಡುಗಡೆ ಆಗಿತ್ತು. ಈಗ ಅದರ ಸೀಕ್ವೆಲ್​ಗೆ ಕೆಲಸಗಳು ಆರಂಭ ಆಗಿವೆ. ‘ಔರೋ ಮೇ ಕಹಾ ಧಮ್​ ತಾ’ ಸಿನಿಮಾದ ಸೋಲಿನ ಬಳಿಕ ಅಜಯ್​ ದೇವಗನ್​ ಅವರು ‘ಸನ್​ ಆಫ್ ಸರ್ದಾರ್​ 2’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಆದರೆ ಅವರ ಜೊತೆ ಸಂಜಯ್​ ದತ್​ ನಟಿಸುವುದು ಅನುಮಾನ ಎನ್ನಲಾಗಿದೆ. ಅವರ ಪಾತ್ರವನ್ನು ರವಿ ಕಿಶನ್​ ನಿಭಾಯಿಸುತ್ತಾರೆ ಎಂದು ಸುದ್ದಿ ಹಬ್ಬಿದೆ.

ಸೀಕ್ವೆಲ್​ ಕಥೆಯ ಬಹುಪಾಲು ದೃಶ್ಯಗಳು ವಿದೇಶದಲ್ಲಿ ನಡೆಯಲಿವೆ. ಆದರೆ ಯುನೈಟೆಡ್​ ಕಿಂಗ್​ಡಮ್​ಗೆ ತೆರಳಲು ಸಂಜಯ್​ ದತ್​ ಅವರಿಗೆ ವೀಸಾ ಸಿಗುತ್ತಿಲ್ಲ. ಅದಕ್ಕೆ ಕಾರಣ ಆಗಿರುವುದು ಅವರ ಅಪರಾಧ ಹಿನ್ನೆಲೆ. 1993ರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ ಹೊಂದಿರುವ ಕಾರಣದಿಂದ ಸಂಜಯ್​ ದತ್​ ಅವರು ಜೈಲು ವಾಸ ಅನುಭವಿಸಿದ್ದರು. ಆ ಬಳಿಕ ಅವರಿಗೆ ಕೆಲವು ದೇಶಗಳಿಗೆ ತೆರಳಲು ವೀಸಾ ಸಮಸ್ಯೆ ಉಂಟಾಯಿತು. ಅದು ಈಗಲೂ ಮುಂದುವರಿದೆ.

ಇದನ್ನೂ ಓದಿ: ರಾ ಏಜೆಂಟ್​ ಆಗಲಿರುವ ರಣವೀರ್​ ಸಿಂಗ್​ಗೆ ಸಂಜಯ್​ ದತ್​ ವಿಲನ್; ಇದು ‘ಕೆಜಿಎಫ್​ 2’ ಎಫೆಕ್ಟ್​

ಸಂಜಯ್​ ದತ್​ ಅವರು ಅಮೆರಿಕಕ್ಕೆ ಹಲವು ಬಾರಿ ತೆರಳಿದ್ದಾರೆ. ಆದರೆ ಯುನೈಟೆಡ್​ ಕಿಂಗ್​ಡಮ್​ಗೆ ಹೋಗಲು ಅವರಿಗೆ ವೀಸಾ ಸಿಗುತ್ತಿಲ್ಲ. ಯುಕೆನಲ್ಲಿ ನಡೆಯಲಿರುವ ‘ಸನ್​ ಆಫ್​ ಸರ್ದಾರ್​ 2’ ಸಿನಿಮಾದ ಶೂಟಿಂಗ್ ಸಲುವಾಗಿ ಸಂಜಯ್​ ದತ್​ ಸಲ್ಲಿಸಿದ್ದ ವೀಸಾ ಅರ್ಜಿ ತಿರಸ್ಕೃತಗೊಂಡಿದೆ. ಹಾಗಾಗಿ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ ಎಂಬ ಗಾಸಿಪ್​ ಹಬ್ಬಿದೆ. ಇನ್ನೊಂದು ಮೂಲದ ಪ್ರಕಾರ, ಸಂಜಯ್​ ದತ್​ ಅವರು ಈ ಸಿನಿಮಾದಲ್ಲಿ ಮುಂದುವರಿಯಲಿದ್ದಾರೆ. ಆದರೆ ಅವರ ಪಾತ್ರದ ಚಿತ್ರೀಕರಣವನ್ನು ಭಾರತದಲ್ಲೇ ಮಾಡಲಾಗುವುದು ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.