ರಾ ಏಜೆಂಟ್ ಆಗಲಿರುವ ರಣವೀರ್ ಸಿಂಗ್ಗೆ ಸಂಜಯ್ ದತ್ ವಿಲನ್; ಇದು ‘ಕೆಜಿಎಫ್ 2’ ಎಫೆಕ್ಟ್
ಸಂಜಯ್ ದತ್ ಅವರನ್ನು ವಿಲನ್ ಪಾತ್ರದಲ್ಲಿ ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಹಾಗಾಗಿ ಅವರಿಗೆ ಅಂಥ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಈಗ ಅವರು ಬಾಲಿವುಡ್ನ ಸ್ಟಾರ್ ಹೀರೋಗಳ ಎದುರಲ್ಲೂ ನೆಗೆಟಿವ್ ಪಾತ್ರ ಮಾಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಣವೀರ್ ಸಿಂಗ್ ಅವರ ಹೊಸ ಚಿತ್ರಕ್ಕೆ ಸಂಜಯ್ ದತ್ ಖಳನಾಯಕ ಎಂದು ಹೇಳಲಾಗುತ್ತಿದೆ.
ನಟ ಸಂಜಯ್ ಸತ್ ಅವರಿಗೆ ವೃತ್ತಿ ಬದುಕಿನಲ್ಲಿ ಇದು ಸೆಕೆಂಡ್ ಇನ್ನಿಂಗ್ಸ್ ಎಂದೇ ಹೇಳಬೇಕು. ಮೊದಲು ಹೀರೋ ಆಗಿ ಮಿಂಚುತ್ತಿದ್ದ ಅವರಿಗೆ ಈಗ ವಿಲನ್ ಪಾತ್ರಗಳು ಹೆಚ್ಚಾಗಿ ಸಿಗುತ್ತಿವೆ. ಅದಕ್ಕೆಲ್ಲ ಕಾರಣ ಆಗಿದ್ದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎಂದರೆ ತಪ್ಪಿಲ್ಲ. ಕನ್ನಡದ ಆ ಸಿನಿಮಾದಲ್ಲಿ ಸಂಜಯ್ ದತ್ ಅವರು ಖಳನಾಯಕನ ಪಾತ್ರ ಮಾಡಿ ಸೈ ಎನಿಸಿಕೊಂಡರು. ಅವರು ಮಾಡಿದ ಅಧೀರನ ಪಾತ್ರ ಸಖತ್ ಫೇಮಸ್ ಆಯಿತು. ಈಗ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ ವಿಲನ್ ಪಾತ್ರಗಳು ಹೇರಳವಾಗಿ ಸಿಗುತ್ತಿವೆ.
ನಟ ರಣವೀರ್ ಸಿಂಗ್ ಅಭಿನಯಿಸಲಿರುವ ಹೊಸ ಸಿನಿಮಾದಲ್ಲಿ ಸಂಜಯ್ ದತ್ ಅವರು ವಿಲನ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ರಣವೀರ್ ಸಿಂಗ್ ಅವರು ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಿಸಿದರು. ‘ಉರಿ’ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಜೊತೆ ಅವರು ಹೊಸ ಸಿನಿಮಾ ಮಾಡುವುದು ಖಚಿತ ಆಗಿದೆ. ಇದೇ ಸಿನಿಮಾದಲ್ಲಿ ಸಂಜಯ್ ದತ್ ಕೂಡ ಇರಲಿದ್ದಾರೆ. ಪಾತ್ರಗಳ ವಿವರಗಳು ಹೊರಬರುತ್ತಿವೆ.
ರಣವೀರ್ ಸಿಂಗ್ಗೆ ಕಿಸ್ ಮಾಡಿದ್ರಾ ಕರಣ್ ಜೋಹರ್? ವೈರಲ್ ಆಗಿದೆ ವಿಡಿಯೋ
ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಹೊಸ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ರಾ ಏಜೆಂಟ್ ಆಗಿ ನಟಿಸಲಿದ್ದಾರೆ. ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಲಿದೆ. ಇದರಲ್ಲಿ ಸಂಜಯ್ ದತ್ ಅವರಿಗೆ ವಿಲನ್ ಪಾತ್ರವನ್ನು ನೀಡಲು ನಿರ್ಧರಿಸಲಾಗಿದೆಯಂತೆ. ಆದರೆ ಈ ವಿಚಾರಗಳ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಸದ್ಯಕ್ಕೆ ಎಲ್ಲವೂ ಅಂತೆ-ಕಂತೆಗಳ ಹಂತದಲ್ಲೇ ಇವೆ.
View this post on Instagram
ರಣವೀರ್ ಸಿಂಗ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲು ಸಖತ್ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಒಂದಷ್ಟು ಪ್ರಾಜೆಕ್ಟ್ಗಳನ್ನು ಮಾತುಕಥೆ ಹಂತದಲ್ಲೇ ಕೈಬಿಟ್ಟ ಬಳಿಕ ಅವರು ಈಗ ಆದಿತ್ಯ ಧಾರ್ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ತುಂಬ ಡಿಫರೆಂಟ್ ಆಗಿರಲಿದೆ ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಇದೇ ಚಿತ್ರದಲ್ಲಿ ಖ್ಯಾತ ನಟರಾದ ಆರ್. ಮಾಧವನ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್ಪಾಲ್ ಕೂಡ ನಟಿಸಲಿದ್ದಾರೆ. ಹಾಗಾಗಿ ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.