ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸಂಜಯ್​ ದತ್​? ಲೋಕಸಭಾ ಚುನಾವಣೆ ಸನಿಹದಲ್ಲಿ ಸಿಕ್ತು ಸ್ಪಷ್ಟನೆ

ಸಿನಿಮಾ ಮಂದಿ ರಾಜಕೀಯಕ್ಕೆ ಬರುವುದು ತುಂಬ ಕಾಮನ್​. ಈಗಾಗಲೇ ರಾಜಕೀಯದಲ್ಲಿ ಯಶಸ್ಸು ಕಂಡ ಅನೇಕರು ಇದ್ದಾರೆ. ಪ್ಯಾನ್​ ಇಂಡಿಯಾ ನಟ ಸಂಜಯ್​ ದತ್​ ಕೂಡ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂದು ಅನೇಕರು ಊಹಿಸಿದ್ದಾರೆ. ಕೆಲವು ಕಡೆಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟ ಆಗಿದೆ. ಆ ಬಗ್ಗೆ ಸಂಜಯ್​ ದತ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸಂಜಯ್​ ದತ್​? ಲೋಕಸಭಾ ಚುನಾವಣೆ ಸನಿಹದಲ್ಲಿ ಸಿಕ್ತು ಸ್ಪಷ್ಟನೆ
ಸಂಜಯ್​ ದತ್​
Follow us
|

Updated on: Apr 08, 2024 | 6:18 PM

ಲೋಕಸಭಾ ಚುನಾವಣೆ (Lok Sabha Elections) ಸಮೀಪಿಸಿದೆ. ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿವೆ. ಹಲವು ಕ್ಷೇತ್ರಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. ಕಂಗನಾ ರಣಾವತ್​, ಅರುಣ್​ ಗೋವಿಲ್​ ಮುಂತಾದ ಕಲಾವಿದರು ಈ ಬಾರಿ ಚುನಾವಣೆಯಲ್ಲಿ (Elections) ಸ್ಪರ್ಧಿಸುತ್ತಿದ್ದಾರೆ. ಬಾಲಿವುಡ್​ನ ಮತ್ತೊರ್ವ ಸ್ಟಾರ್ ನಟ ಸಂಜಯ್​ ದತ್​ (Sanjay Dutt) ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಬಗ್ಗೆ ಕೆಲವು ಕಡೆಗಳಲ್ಲಿ ಗಾಳಿಸುದ್ದಿ ಹಬ್ಬಿದೆ. ಅದಕ್ಕೆ ಸ್ವತಃ ಸಂಜಯ್​ ದತ್​ ಅವರು ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.

‘ನಾನು ರಾಜಕೀಯಕ್ಕೆ ಸೇರುತ್ತೇನೆ ಎಂಬ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲು ನಾನು ಬಯಸುತ್ತೇನೆ. ನಾನು ಯಾವುದೇ ಪಕ್ಷ ಸೇರುವುದಿಲ್ಲ ಅಥವಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ. ಸದ್ಯಕ್ಕೆ ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ನಂಬುವುದರಿಂದ ದೂರವಿರಿ’ ಎಂದು ಸಂಜಯ್​ ದತ್​ ಅವರು ‘ಎಕ್ಸ್​’ (ಟ್ವಿಟರ್​) ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಮೊದಲು ಕೂಡ ಸಂಜಯ್​ ದತ್​ ಅವರ ಬಗ್ಗೆ ಈ ರೀತಿಯ ಗಾಳಿ ಸುದ್ದಿಗಳು ಹಬ್ಬಿದ್ದವು. 2019ರಲ್ಲಿ ‘ರಾಷ್ಟ್ರೀಯ ಸಮಾಜ ಪಕ್ಷ’ ಸೇರುವಂತೆ ಅವರಿಗೆ ಆಫರ್​ ನೀಡಲಾಗಿತ್ತು ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಈಗ ಲೋಕಸಭಾ ಚುನಾವಣೆಯ ಕಾವು ಜೋರಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಜಯ್​ ದತ್​ ಅವರ ಬಗ್ಗೆ ಗಾಸಿಪ್​ ಹರಡಿದೆ. ಆದರೆ ಅವರೇ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಅಂಕೆ-ಕಂತೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೇರಿದ ಬಳಿಕ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ

ಸಂಜಯ್​ ದತ್​ ಅವರಿಗೆ ದೇಶಾದ್ಯಂತ ಖ್ಯಾತಿ ಇದೆ. ಮೊದಲು ಬಾಲಿವುಡ್​ನಲ್ಲಿ ಮಾತ್ರ ಫೇಮಸ್​ ಆಗಿದ್ದ ಅವರು ಈಗ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಸಂಜಯ್​ ದತ್​ ಮಾಡಿದ ಅಧೀರ ಎಂಬ ಪಾತ್ರ ಎಲ್ಲರ ಗಮನ ಸೆಳೆಯಿತು. ಬಳಿಕ ಅವರಿಗೆ ದಕ್ಷಿಣ ಭಾರತದಿಂದ ಹಲವು ಅವಕಾಶಗಳು ಸಿಗಲಾರಂಭಿಸಿದವು. ಸದ್ಯಕ್ಕೆ ಅವರು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ರಾಜಕೀಯದ ಬಗ್ಗೆ ಗಮನ ಹರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.