ವೃದ್ಧಾಶ್ರಮಕ್ಕೆ ಹೊಸ ಸಿನಿಮಾದ ಕಲೆಕ್ಷನ್​ ಹಣ ನೀಡಲಿರುವ ಸೋನು ಸೂದ್​

|

Updated on: Dec 15, 2024 | 4:51 PM

ಸೋನು ಸೂದ್​ ಅವರು ‘ಫತೇಹ್’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಪತ್ನಿ ಸೋನಾಲಿ ಈ ಚಿತ್ರದ ನಿರ್ಮಾಪಕಿ. ಜಾಕ್ವೆಲಿನ್​ ಫರ್ನಾಂಡಿಸ್​, ನಸೀರುದ್ಧೀನ್ ಶಾ, ವಿಜಯ್ ರಾಝ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಜ.10ರಂದು ಈ ಸಿನಿಮಾ ತೆರೆಕಾಣಲಿದೆ. ಸೈಬರ್​ ಕ್ರೈಮ್ ಕುರಿತ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.

ವೃದ್ಧಾಶ್ರಮಕ್ಕೆ ಹೊಸ ಸಿನಿಮಾದ ಕಲೆಕ್ಷನ್​ ಹಣ ನೀಡಲಿರುವ ಸೋನು ಸೂದ್​
ಸೋನು ಸೂದ್
Follow us on

ನಟ ಸೋನು ಸೂದ್​ ಅವರು ಈಗಾಗಲೇ ಅನೇಕ ಜನಪರ ಕಾರ್ಯಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕೊವಿಡ್​ ಕಾಲದಿಂದ ಶುರುವಾದ ಅವರ ಸಮಾಜಸೇವೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಹಾಗಾಗಿ ಜನರು ಅವರನ್ನು ರಿಯಲ್ ಹೀರೋ ಎನ್ನುತ್ತಾರೆ. ಈಗ ಸೋನು ಸೂದ್​ ಅವರು ಇನ್ನೊಂದು ಪುಣ್ಯದ ಕಾರ್ಯ ಮಾಡಲು ಮುಂದಾಗಿದ್ದಾರೆ. ತಮ್ಮ ಹೊಸ ಸಿನಿಮಾದಿಂದ ಬರುವ ಬಾಕ್ಸ್ ಆಫೀಸ್​ ಕಲೆಕ್ಷನ್​ ಮೊತ್ತವನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ನೀಡುವುದಾಗಿ ಅವರು ಹೇಳಿದ್ದಾರೆ.

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಸೋನು ಸೂದ್​ ಅವರು ನಟಿಸಿ ಫೇಮಸ್​ ಆಗಿದ್ದಾರೆ. ಅವರು ತೆರೆ ಮೇಲೆ ವಿಲನ್ ಪಾತ್ರ ಮಾಡಿದರೂ ರಿಯಲ್ ಲೈಫ್​ನಲ್ಲಿ ನಿಜವಾದ ಹೀರೋ ಆಗಿದ್ದಾರೆ. ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಈಗ ಅವರು ‘ಫತೇಹ್’ ಚಿತ್ರದ ಕಲೆಕ್ಷನ್​ ಹಣವನ್ನು ಕೂಡ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.

‘ಫತೇಹ್’ ಸಿನಿಮಾಗೆ ಸ್ವತಃ ಸೋನು ಸೂದ್​ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಸೈಬರ್​ ಕ್ರೈಂ ಕುರಿತಾದ ಕಹಾನಿ ಈ ಸಿನಿಮಾದಲ್ಲಿ ಇದೆ. ಈ ಚಿತ್ರದ ಮೂಲಕ ಜನರಿಗೆ ಸೈಬರ್​ ಸುರಕ್ಷತೆ ಬಗ್ಗೆ ಸಂದೇಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ನಡೆದ ಸೈಬರ್ ವಂಚನೆಗಳನ್ನು ಆಧರಿಸಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಇದನ್ನೂ ಓದಿ: ಮಹಾಕಾಳೇಶ್ವರ ದರ್ಶನ ಪಡೆದ ಬಹುಭಾಷಾ ನಟ ಸೋನು ಸೂದ್

ಸೋನು ಸೂದ್​ ಅವರ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​, ವಿಜಯ್ ರಾಝ್, ನಸೀರುದ್ಧೀನ್ ಶಾ ಕೂಡ ‘ಫತೇಹ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜನವರಿ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸೋನು ಸೂದ್​ ಅವರ ಪತ್ನಿ ಸೊನಾಲಿ ಸೂದ್​ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ದೇಶದ ಜನರಿಗಾಗಿ ನಾವು ಈ ಸಿನಿಮಾವನ್ನು ಮಾಡಿದ್ದೇವೆ. ಈ ಚಿತ್ರದ ಕಲೆಕ್ಷನ್​ ಹಣವನ್ನು ನಾವು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಕಳಿಸಿ ಕೊಡಲು ಪ್ರಯತ್ನಿಸುತ್ತೇವೆ’ ಎಂದು ಸೋನು ಸೂದ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.