ಬಾಲಿವುಡ್​ಗೆ ಹಾರಲಿರುವ ‘ಸು ಫ್ರಂ ಸೋ’ ನಿರ್ದೇಶಕ, ಸ್ಟಾರ್ ನಟನೊಟ್ಟಿಗೆ ಸಿನಿಮಾ

Su From So director: ಜೆಪಿ ತುಮ್ಮಿನಾಡ್ ನಟಿಸಿ ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ‘ಸು ಫ್ರಂ ಸೋ’ ಸಿನಿಮಾದಿಂದಾಗಿ ನಿರ್ದೇಶಕ ಜೆಪಿ ತುಮ್ಮಿನಾಡ್​ಗೆ ಹಲವು ದೊಡ್ಡ ಅವಕಾಶಗಳು ಎದುರಾಗಿವೆ. ಬಾಲಿವುಡ್​ನ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ತುಮ್ಮಿನಾಡ್.

ಬಾಲಿವುಡ್​ಗೆ ಹಾರಲಿರುವ ‘ಸು ಫ್ರಂ ಸೋ’ ನಿರ್ದೇಶಕ, ಸ್ಟಾರ್ ನಟನೊಟ್ಟಿಗೆ ಸಿನಿಮಾ
Jp Tumminad

Updated on: Aug 21, 2025 | 6:51 PM

ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆಪಿ ತುಮ್ಮಿನಾಡು ನಿರ್ದೇಶನ ಮಾಡಿರುವ ‘ಸು ಫ್ರಂ ಸೋ’ ಸಿನಿಮಾ ಬಾಕ್ಸ್ ಆಫೀಸ್​ ಅನ್ನು ಕೊಳ್ಳೆ ಹೊಡೆಯುತ್ತಿದೆ. ಸಣ್ಣ ಬಜೆಟ್​ನಲ್ಲಿ ಹೆಚ್ಚಿನ ನಿರೀಕ್ಷೆಗಳ ಭಾರವಿಲ್ಲದೆ ನಿರ್ಮಾಣವಾದ ಸಿನಿಮಾ ತಮ್ಮ ಕಂಟೆಂಟ್​​ನಿಂದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಷ್ಟೇ ದೊಡ್ಡ ಸಿನಿಮಾಗಳು ಎದುರಾದರೂ ವೇಗ ಕಳೆದುಕೊಳ್ಳದೆ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಕರ್ನಾಟಕ ದಾಟಿ ಹೊರ ರಾಜ್ಯಗಳಲ್ಲಿಯೂ ಸದ್ದು ಮಾಡುತ್ತಿದೆ. ಇದೀಗ ‘ಸು ಫ್ರಂ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್, ಬಾಲಿವುಡ್​ಗೆ ಕಾಲಿಟ್ಟಿದ್ದು, ಸ್ಟಾರ್ ನಿರ್ದೇಶಕನಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

‘ಸು ಫ್ರಂ ಸೋ’ ಸಿನಿಮಾ ಕೇರಳ, ಆಂಧ್ರ-ತೆಲಂಗಾಣಗಳಲ್ಲಿಯೂ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಾಲಿವುಡ್​ನ ಸ್ಟಾರ್ ನಟ ಅಜಯ್ ದೇವಗನ್ ಸಹ ‘ಸು ಫ್ರಂ ಸೋ’ ಸಿನಿಮಾ ನೋಡಿ ಸಿನಿಮಾ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಜೊತೆಗೆ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರನ್ನು ಕರೆಸಿ ಅವರೊಟ್ಟಿಗೆ ಚರ್ಚೆ ನಡೆಸಿದ್ದರು.

ಇದೀಗ ಹೊರ ಬಂದಿರುವ ಸುದ್ದಿಯೆಂದರೆ ಆ ಚರ್ಚೆಯಲ್ಲಿ ಅಜಯ್ ಸಿನಿಮಾಕ್ಕೆ ತುಮ್ಮಿನಾಡ್ ನಿರ್ದೇಶನ ಮಾಡುವ ಬಗ್ಗೆ ಮಾತುಕತೆ ಆಗಿದೆಯಂತೆ. ಹಾರರ್ ಕಾಮಿಡಿ ಕತೆಯೊಂದರ ಎಳೆಯನ್ನು ತುಮ್ಮಿನಾಡ್, ಅಜಯ್ ದೇವಗನ್ ಅವರಿಗೆ ಹೇಳಿದ್ದು, ಅಜಯ್​ಗೂ ಸಹ ಕತೆಯ ಎಳೆ ಇಷ್ಟವಾಗಿದೆಯಂತೆ. ಪೂರ್ಣ ಚಿತ್ರಕತೆಯೊಟ್ಟಿಗೆ ಭೇಟಿ ಮಾಡುವಂತೆ ಅಜಯ್ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ ಅಜಯ್ ಹಾಗೂ ತುಮ್ಮಿನಾಡ್ ಅವರ ಸಿನಿಮಾಕ್ಕೆ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್​ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ. ಹೀಗೆಂದು ಬಾಲಿವುಡ್​ನ ಜನಪ್ರಿಯ ಮ್ಯಾಗಜೀನ್ ಒಂದು ವರದಿ ಮಾಡಿದೆ. ಇದೀಗ ಜೆಪಿ ತುಮ್ಮಿನಾಡ್ ಅವರು ಅಜಯ್ ಅವರಿಗಾಗಿ ನಿರ್ದೇಶನ ಮಾಡಲಿರುವ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇನ್ನೊಂದು ತಿಂಗಳಲ್ಲಿ ಅಜಯ್ ಅವರನ್ನು ಮತ್ತೊಮ್ಮೆ ತುಮ್ಮಿನಾಡ್ ಭೇಟಿ ಆಗಲಿದ್ದಾರಂತೆ.

ಅಜಯ್ ದೇವಗನ್ ಕಾಮಿಡಿ, ಹಾರರ್, ಆಕ್ಷನ್, ಕೌಟುಂಬಿಕ, ಪೊಲೀಸ್, ಸೈನ್ಯ ಎಲ್ಲ ರೀತಿಯ ಕತೆಗಳನ್ನು ಒಳಗೊಂಡಿರುವ ಸಿನಿಮಾಗಳಿಗೂ ಒಪ್ಪುವ ನಟ. ಈಗಾಗಲೇ ಕೆಲವು ಹಾರರ್ ಕಾಮಿಡಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ತುಮ್ಮಿನಾಡ್ ಅವರು ಹಾರರ್ ಕಾಮಿಡಿ ಕತೆಯನ್ನೇ ಅಜಯ್ ಅವರಿಗಾಗಿ ರೆಡಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ