ಸಿನಿಮಾಗಳಿಗೆ ವಿವಾದ ಏನೂ ಹೊಸದಲ್ಲ. ಸಣ್ಣಸಣ್ಣ ವಿಚಾರಗಳನ್ನೇ ಇಟ್ಟುಕೊಂಡು ಕಾಂಟ್ರವರ್ಸಿ ಮಾಡಲಾಗುತ್ತದೆ. ಕಾಲ್ಪನಿಕ ಕಥೆ ಆಧರಿಸಿ ಬಂದ ಚಿತ್ರಗಳಲ್ಲೂ ತಪ್ಪನ್ನು ಹುಡುಕಲಾಗುತ್ತದೆ. ಹೀಗಿರುವಾಗ ವಿವಾದಾತ್ಮಕ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ ಕೇಳಬೇಕೆ? ‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ಈಗ ಅಂಥದ್ದೇ ಸಮಸ್ಯೆ ಎದುರಿಸುತ್ತಿದೆ. ಇದು ಸತ್ಯ ಘಟನೆ ಆಧಾರಿತ ಚಿತ್ರ ಎಂದು ತಂಡ ಹೇಳಿಕೊಂಡಿತ್ತು. ಅಷ್ಟೇ ಅಲ್ಲ, ಕೇರಳದಿಂದ 32 ಸಾವಿರ ಮಹಿಳೆಯರು ಐಸಿಸ್ ಸೇರಿದ್ದಾರೆ ಎಂದು ವಾದಿಸಿತ್ತು. ಆದರೆ ನಿರ್ದೇಶಕ ಸುದಿಪ್ತೋ ಸೇನ್ (Sudipto Sen) ಈಗ ವರಸೆ ಬದಲಿಸಿದ್ದಾರೆ.
‘ದಿ ಕೇರಳ ಸ್ಟೋರಿ’ಯಲ್ಲಿ ಹೇಳುತ್ತಿರುವುದು ತುಂಬಾನೇ ಸೂಕ್ಷ್ಮ ವಿಚಾರ. ಕೇರಳದಲ್ಲಿ ಕಾಣೆಯಾದ ಕೆಲ ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್ ಸೇರಿದ್ದಾರೆ ಎಂಬುದು ಅನೇಕರ ಆರೋಪ. ಇದೇ ವಿಚಾರ ಇಟ್ಟುಕೊಂಡು ಸುದಿಪ್ತೋ ಸೇನ್ ಸಿನಿಮಾ ಮಾಡಿದ್ದಾರೆ. ಈ ರೀತಿ ಐಸಿಸ್ ಸೇರಿದವರ ಸಂಖ್ಯೆ 32 ಸಾವಿರ ಇದೆ ಎಂದು ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಈ ವಿಚಾರದಲ್ಲಿ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿದ್ದರು. ಕೇರಳದ ಹೆಸರು ಕೆಡಿಸಲು ಮಾಡಿದ ಸಿನಿಮಾ ಎಂದು ಅಸಮಾಧಾನ ಹೊರಹಾಕಿದ್ದರು. ಇದಲ್ಲದೆ, ಕೇರಳದ ಅನೇಕ ನಾಯಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಚಿತ್ರಕ್ಕೆ ತಡೆನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಕೆ ಆಯಿತು. ಸಿನಿಮಾ ರಿಲೀಸ್ಗೆ ಅಡ್ಡಿ ಉಂಟಾಗಬಹುದು ಎನ್ನುವ ಭಯ ಸುದಿಪ್ತೋ ಸೇನ್ಗೆ ಕಾಡಿದೆ. ಹೀಗಾಗಿ, ಅವರು ವರಸೆ ಬದಲಿಸಿದ್ದಾರೆ.
ಬುಕ್ ಮೈ ಶೋ ಮೊದಲಾದ ಕಡೆಗಳಲ್ಲಿ ಸಿನಿಮಾದ ಕಥೆ ಏನು ಎಂಬುದನ್ನು ಒಂದೆಳೆಯಲ್ಲಿ ವಿವರಿಸುವಾಗ, ‘ಕೇರಳದ 32 ಸಾವಿರ ಮಹಿಳೆಯರು ಐಸಿಸ್ ಸೇರಿದ ಕಥೆ’ ಎಂದು ಬರೆಯಲಾಗಿತ್ತು. ಆದರೆ, ಈಗ 32 ಸಾವಿರದ ಬದಲಿಗೆ ಮೂರು ಎಂದು ಬರೆಯಲಾಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸತ್ಯ ಹೇಳುತ್ತಿದ್ದೀರಿ ಎಂದ ಮೇಲೆ ಭಯ ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ಮೊದಲು ಸಿನಿಮಾ ನೋಡಿ, ಆಮೇಲೆ ಮಾತಾಡಿ’: ‘ದಿ ಕೇರಳ ಸ್ಟೋರಿ’ ವಿವಾದಕ್ಕೆ ಅದಾ ಶರ್ಮಾ ಪ್ರತಿಕ್ರಿಯೆ
. #TheKeralaStory isn’t about, elections , agenda, religion vs religion.. it is about something much bigger. LIFE and DEATH ! It is about Terrorism vs Humanity. Calling it propaganda is covering up the story of each girl whose life was destroyed ? pic.twitter.com/T4fkBRGB9D
— Adah Sharma (@adah_sharma) April 29, 2023
ಸುದಿಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ಆಧರಿಸಿ ಸಿದ್ಧಗೊಂಡ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಗೆದ್ದಿತ್ತು. ಈಗ ‘ದಿ ಕೇರಳ ಸ್ಟೋರಿ’ ಕೂಡ ಗೆಲ್ಲಲಿದೆಯೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಮೇ 5ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ