‘ಆಕೆಯ ಬಣ್ಣ ಬಯಲು ಮಾಡ್ತೀನಿ’: ಜೈಲಿನಿಂದಲೇ ಎಚ್ಚರಿಕೆ ಸಂದೇಶ ನೀಡಿದ ಸುಕೇಶ್​ ಚಂದ್ರಶೇಖರ್​

‘ಇಷ್ಟು ದಿನ ನಾನು ನಿನ್ನನ್ನು ರಕ್ಷಿಸುತ್ತಿದ್ದೆ. ಈಗ ಸುಮ್ಮನಿರುವುದಿಲ್ಲ. ಕಾನೂನಿನ ಪ್ರಕಾರ ಎಲ್ಲ ಸಾಕ್ಷಿ ಬಹಿರಂಗ ಮಾಡುತ್ತೇನೆ’ ಎಂದು ಸುಕೇಶ್​ ಚಂದ್ರಶೇಖರ್​ ಗರಂ ಆಗಿದ್ದಾನೆ. ಮೂಲಗಳ ಪ್ರಕಾರ, ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸುಕೇಶ್​ ಚಂದ್ರಶೇಖರ್​ ಕಡೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ.

‘ಆಕೆಯ ಬಣ್ಣ ಬಯಲು ಮಾಡ್ತೀನಿ’: ಜೈಲಿನಿಂದಲೇ ಎಚ್ಚರಿಕೆ ಸಂದೇಶ ನೀಡಿದ ಸುಕೇಶ್​ ಚಂದ್ರಶೇಖರ್​
ಜಾಕ್ವೆಲಿನ್​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​

Updated on: Dec 22, 2023 | 5:52 PM

ಖ್ಯಾತ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ವಂಚಕ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಸಹವಾಸದಿಂದ ತೊಂದರೆಗೆ ಸಿಲುಕಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್​ ಈಗಾಗಲೇ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಹಲವು ಬಾರಿ ಪತ್ರಗಳನ್ನು ಬರೆದಿದ್ದಾನೆ. ಈಗ ಆತ ತುಂಬ ಖಾರವಾಗಿ ಹೊಸ ಲೆಟರ್​ ಕಳಿಸಿದ್ದಾನೆ ಎಂದು ವರದಿ ಆಗಿದೆ. ನಟಿಯ ನಿಜವಾದ ಬಣ್ಣ ಬಯಲು ಮಾಡುವುದಾಗಿ ಸುಕೇಶ್​ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ. ವಂಚನೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರು ಇತ್ತೀಚೆಗೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಸುಕೇಶ್​ ಚಂದ್ರಶೇಖರ್​ ಈ ರೀತಿ ಎಚ್ಚರಿಕೆ ಸಂದೇಶ ನೀಡಿದ್ದಾನೆ.

ಸುಕೇಶ್​ ಚಂದ್ರಶೇಖರ್​ ಕಡೆಯಿಂದ ತಮಗೆ ಯಾವುದೇ ಪತ್ರಗಳು ಬರಬಾರದು ಎಂದು ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದರು. ಆ ವಿಚಾರ ತಿಳಿದ ಬಳಿಕ ಸುಕೇಶ್​ಗೆ ನೋವಾಗಿದೆಯಂತೆ. ‘ಇಷ್ಟು ದಿನಗಳ ಕಾಲ ನಾನು ನಿನ್ನನ್ನು ರಕ್ಷಿಸುತ್ತಿದ್ದೆ. ಈಗ ನಾನು ಸುಮ್ಮನಿರುವುದಿಲ್ಲ. ಕಾನೂನಿನ ಪ್ರಕಾರ ಎಲ್ಲ ಸಾಕ್ಷಿಯನ್ನು ಬಹಿರಂಗ ಮಾಡುತ್ತೇನೆ’ ಎಂದು ಸುಕೇಶ್​ ಚಂದ್ರಶೇಖರ್​ ಗರಂ ಆಗಿದ್ದಾನೆ.

ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡಿಸ್​​ಗೆ ಮತ್ತೆ ಶುರುವಾಯ್ತು ಸಂಕಷ್ಟ

ಮೂಲಗಳ ಪ್ರಕಾರ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸುಕೇಶ್​ ಚಂದ್ರಶೇಖರ್​ ಕಡೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. 52 ಲಕ್ಷ ರೂಪಾಯಿ ಬೆಲೆಯ ಕುದುರೆ, 9 ಲಕ್ಷ ರೂಪಾಯಿಯ ಪರ್ಷಿಯನ್​ ಬೆಕ್ಕನ್ನು ಕೂಡ ಅವರು ಪಡೆದುಕೊಂಡಿದ್ದಾರೆ. ನಟಿಯ ಸಲುವಾಗಿ ತಾನು ಅನೇಕ ಬಾರಿ ಹಣ ಖರ್ಚು ಮಾಡಿರುವುದಾಗಿ ಸುಕೇಶ್​ ಹೇಳಿಕೊಂಡಿದ್ದಾರೆ.

ಜಾಕ್ವೆಲಿನ್​ ಫರ್ನಾಂಡಿಸ್​ ಮತ್ತು ಸುಕೇಶ್​ ಚಂದ್ರಶೇಖರ್​ ಅವರು ತುಂಬ ಆಪ್ತವಾಗಿದ್ದರು. ಅವರಿಬ್ಬರು ಇಂಟಿಮೇಟ್​ ಆಗಿ ಕ್ಲಿಕ್ಕಿಸಿಕೊಂಡಿದ್ದ ಕೆಲವು ಫೋಟೋಗಳು ವೈರಲ್​ ಆಗಿದ್ದವು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್​ ಫರ್ನಾಂಡಿಸ್​ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಎಫ್​ಐಆರ್​ ಮತ್ತು ಚಾರ್ಜ್​ಶೀಟ್​ನಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಈ ಪ್ರಕರಣದಿಂದ ತಮ್ಮನ್ನು ಹೊರಗೆ ಇಡಬೇಕು ಎಂದು ಅವರು ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us