ಕನ್ನಡದಲ್ಲೂ ಮಧುರ ಗೀತೆಗಳನ್ನು ಹಾಡಿದ್ದ ಖ್ಯಾತ ಗಾಯಕಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ

ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕಿ ಸುಮನ್ ಕಲ್ಯಾಣ್‌ಪುರ್ 89ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕವನ್ನು ತಮ್ಮ ಧ್ವನಿಯಿಂದ ಆಳಿದ ಇವರು, ಹಿಂದಿ, ಮರಾಠಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಮೂರು ಅದ್ಭುತ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಸುಮನ್ ಅವರ ನಿಧನಕ್ಕೆ ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಕನ್ನಡದಲ್ಲೂ ಮಧುರ ಗೀತೆಗಳನ್ನು ಹಾಡಿದ್ದ ಖ್ಯಾತ ಗಾಯಕಿ ಸುಮನ್ ಕಲ್ಯಾಣ್‌ಪುರ್ ಇನ್ನಿಲ್ಲ
ಸುಮನ್

Updated on: Jun 02, 2026 | 7:32 AM

ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕಿ ಸುಮನ್ ಕಲ್ಯಾಣ್‌ಪುರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೇ 31ರಂದು ಮುಂಬೈನ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಲೋಕವನ್ನು ತಮ್ಮ ಸುಮಧುರ ಧ್ವನಿಯಿಂದ ಆಳಿದ್ದ ಖ್ಯಾತಿ ಇವರಿಗೆ ಇದೆ. ಸುಮನ್ ನಿರ್ಗಮನದೊಂದಿಗೆ ಸಂಗೀತ ಕ್ಷೇತ್ರದ ಅಪರೂಪದ ಕೊಂಡಿಯೊಂದು ಕಳಚಿದಂತಾಗಿದೆ.

ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿ, ನಂತರ ಮುಂಬೈನಲ್ಲಿ ನೆಲೆಸಿದ್ದ ಸುಮನ್ ಕಲ್ಯಾಣ್‌ಪುರ್ ಅವರು ಹಿಂದಿ, ಮರಾಠಿ, ಕನ್ನಡ, ಬೆಂಗಾಲಿ ಮತ್ತು ಒಡಿಯಾ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿದ್ದರು. ಅವರ ಕಲಾ ಸೇವೆಗೆ ಹಲವು ರಾಷ್ಟ್ರೀಯ ಹಾಗೂ ಚಲನಚಿತ್ರ ಪ್ರಶಸ್ತಿಗಳು ಒಲಿದುಬಂದಿದ್ದವು. ಸದ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಸಂಗೀತ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಸುಮನ್ ಕಲ್ಯಾಣ್‌ಪುರ್ ಅವರು ಕನ್ನಡ ಚಿತ್ರರಂಗದಲ್ಲೂ ತಮ್ಮ ಮಧುರ ಕಂಠದ ಛಾಪು ಮೂಡಿಸಿದ್ದಾರೆ ಎಂಬುದು ವಿಶೇಷ. ಕನ್ನಡದಲ್ಲಿ ಅವರು ಒಟ್ಟು 3 ಅದ್ಭುತ ಹಾಡುಗಳನ್ನು ಹಾಡಿದ್ದು, ಕನ್ನಡಿಗರ ಮನ ಗೆದ್ದಿದ್ದರು. ಕೇವಲ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದ ಭಾಷೆಗಳಲ್ಲೂ ಸುಶ್ರಾವ್ಯವಾಗಿ ಹಾಡಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದರು.

‘ಒಡನಾಡಿ ಬೇಕೆಂದು’, ‘ಹನಿ ಹನಿ ಹೀರಿ ತಣಿ ಹರೆಯ’, ‘ತಲ್ಲಣ ನೂರು ಬಗೆ’ ಹಾಡನ್ನು ಅವರು ಹಾಡಿದ್ದರು. ಸುಮನ್ ಅವರು ತಮ್ಮ ಕೊನೆಯ ದಿನಗಳನ್ನು ತಮಗೆ ಅಪಾರ ಕೀರ್ತಿ ತಂದುಕೊಟ್ಟ ಸಂಗೀತದ ಮಧ್ಯೆಯೇ ಕಳೆದಿದ್ದರು. ಕೊನೆಯುಸಿರೆಳೆಯುವ ಮುನ್ನ ಅವರು ತಾವು ಹಾಡಿದ್ದ ಹಳೆಯ ಗೀತೆಗಳನ್ನು ಕೇಳುತ್ತಲೇ ಕಾಲ ಕಳೆದಿದ್ದರು ಎಂದು ವರದಿ ಆಗಿದೆ.

ಇದನ್ನೂ ಓದಿ: ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಅಪ್ರತಿಮ ಶಾಸ್ತ್ರೀಯ ಸಂಗೀತ ಜ್ಞಾನ ಮತ್ತು ಮಧುರ ಧ್ವನಿಗೆ ಹೆಸರಾಗಿದ್ದ ಸುಮನ್ ಅವರು ಹಿಂದಿಯ ‘ಆಜ್ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀ ಸೆ’, ‘ತುಮ್ನೆ ಪುಕಾರಾ ಔರ್ ಹಮ್ ಚಲೆ ಆಯೇ’ ನಂತಹ ಸಾರ್ವಕಾಲಿಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us