ಮಂಗಳೂರಿನ ಮುಲ್ಕಿಯಲ್ಲಿ 1962, ಆಗಸ್ಟ್ 11 ರಂದು ಜನಿಸಿದ ಸುನಿಲ್ ಶೆಟ್ಟಿ ಹಲವು ದಶಗಳಿಂದಲೂ ಬಾಲಿವುಡ್ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಈಗ ಸುನಿಲ್ ಶೆಟ್ಟಿಗೆ 62 ವರ್ಷ ವಯಸ್ಸು ಆದರೆ ಈಗಲೂ ಸಹ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಫಿಟ್ನೆಸ್. ಚಿತ್ರರಂಗಕ್ಕೆ ಕಾಲಿರಿಸಿದಾಗಿನಿಂದಲೂ ಫಿಟ್ನೆಸ್ ಮೇಲೆ ಗಮನ ಹರಿಸಿರುವ ಸುನಿಲ್ ಶೆಟ್ಟಿ ಇಂದಿಗೂ ಜಿಮ್ ಅನ್ನು ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ದಶಕಗಳ ಕಾಲ ಬಾಲಿವುಡ್ನಲ್ಲಿ ಸಕ್ರಿಯರಾಗಿರುವ ಸುನಿಲ್ ಶೆಟ್ಟಿ, ಒಂದು ಸಮಯದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಅಂದಹಾಗೆ ಸುನಿಲ್ ಶೆಟ್ಟಿಯ ಈಗಿನ ಆಸ್ತಿ ಮೌಲ್ಯ ಎಷ್ಟು? ಅವರು ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೆಟ್ಟಿ ಅವರ ಬಳಿ ಇರುವ ಸಂಗ್ರಹದಲ್ಲಿ ಎಂಥಹಾ ಐಶಾರಾಮಿ ಕಾರುಗಳಿವೆ? ಇಲ್ಲಿದೆ ಇಣುಕು ನೋಟ….
90ರ ದಶಕದಲ್ಲಿ ಸುನಿಲ್ ಶೆಟ್ಟಿ ಬಾಲಿವುಡ್ನ ಅತ್ಯಂತ ಬೇಡಿಕೆಯ ನಟ. ಒಂದು ಸಮಯದಲ್ಲಿ ಆಕ್ಷನ್ ಸಿನಿಮಾಗಳ ಬಿರುಗಾಳಿ ಬೀಸಿತ್ತು. ಆಗ ಸುನಿಲ್ ಶೆಟ್ಟಿ, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅಂಥಹಾ ನಟರಿಗೆ ಬೇಡಿಕೆ ಹುಟ್ಟಿತ್ತು. ಆ ಸಮಯದಲ್ಲಿ ಶಾರುಖ್, ಸಲ್ಮಾನ್ಗಿಂತಲೂ ಶೆಟ್ಟಿ, ಅಕ್ಷಯ್, ಅಜಯ್ ಅವರಿಗೆ ಸಂಭಾವನೆ ಹೆಚ್ಚಿತ್ತು. ಮಂಗಳೂರು ಮೂಲಕ ಸುನಿಲ್ ಶೆಟ್ಟಿ ಮೊದಲಿನಿಂದಲೂ ಜಾಣ ಹೂಡಿಕೆದಾರ. ಅವರೇ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಅನವಶ್ಯಕವಾಗಿ ಖರ್ಚು ಮಾಡುವುದು ಅವರಿಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ.
ಇದನ್ನೂ ಓದಿ:IPL ಮುಗಿಯೋವರೆಗೂ ನೀ ನನ್ನ ಮಗನೇ ಅಲ್ಲ: ಸುನಿಲ್ ಶೆಟ್ಟಿ-ಕೆಎಲ್ ರಾಹುಲ್ ವಿಡಿಯೋ ವೈರಲ್
ಸುನಿಲ್ ಶೆಟ್ಟಿ ಅವರ ಮೆಚ್ಚಿನ ಹೂಡಿಕೆ ಕ್ಷೇತ್ರ ರಿಯಲ್ ಎಸ್ಟೇಟ್. ಇದರಿಂದಾಗಿ ದೊಡ್ಡ ಲಾಭವನ್ನು ಸಹ ಸುನಿಲ್ ಶೆಟ್ಟಿ ಗಳಿಸಿದ್ದಾರೆ. ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಹಾಗೂ ಕೆಎಲ್ ರಾಹುಲ್ ವಿವಾಹವಾದ ಫಾರಂ ಹೌಸ್ ನೆನಪಿದೆಯೇ? ಅದು ಸುನಿಲ್ ಶೆಟ್ಟಿ ಅವರದ್ದೆ. ಈ ಫಾರಂ ಹೌಸ್ ಮುಂಬೈನ ಹೊರವಲಯದಲ್ಲಿದ್ದು, ಫಾರಂ ಹೌಸ್ನ ಮೌಲ್ಯ ಸುಮಾರು 100 ಕೋಟಿ ಎನ್ನಲಾಗುತ್ತದೆ. ಇದರ ಹೊರತಾಗಿ ಮುಂಬೈನಲ್ಲಿ ಕೆಲವು ಅಪಾರ್ಟ್ಮೆಂಟ್ಗಳ ಮೇಲೂ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಕೆಲ ಫ್ಲ್ಯಾಟ್ಗಳನ್ನು ಸಹ ಶೆಟ್ಟಿ ಖರೀದಿ ಮಾಡಿದ್ದರು. ಅದರಲ್ಲಿ ಒಂದನ್ನು ಕೆಎಲ್ ರಾಹುಲ್ ಹಾಗೂ ಅಥಿಯಾಗೆ ನೀಡಿದರು. ಕರ್ನಾಟಕದಲ್ಲಿಯೂ ಸಹ ಸುನಿಲ್ ಶೆಟ್ಟಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತದೆ.
ಸುನಿಲ್ ಶೆಟ್ಟಿ ಅವರು, ಪಾಪಾ ಕಾರ್ನ್ ಮೀಡಿಯಾ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸುನಿಲ್ ಶೆಟ್ಟಿ ತಮ್ಮ ಪುತ್ರನ ಸಿನಿಮಾವನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಇನ್ನು ಶೆಟ್ಟಿ ಅವರು ಫಿಟ್ನೆಸ್ಗೆ ಸಂಬಂಧಿಸಿದ ಕೆಲವು ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೆಟ್ಟಿ ಅವರದ್ದು ಮುಂಬೈನಲ್ಲಿ ಕೆಲವು ಕಡೆಗಳಲ್ಲಿ ಜಿಮ್ ಸಹ ಇದೆ.
ಇನ್ನು ಕಾರುಗಳ ಸಂಗ್ರಹಕ್ಕೆ ಬಂದರೆ, ಸುನಿಲ್ ಶೆಟ್ಟಿ ಅವರಿಗೆ ಬಹಳ ಕಾರಿನ ಹುಚ್ಚಿಲ್ಲವಂತೆ. ಆದರೆ ಕಂಫರ್ಟ್ ನೀಡುವ, ಐಶಾರಾಮಿ ಫೀಲ್ ನೀಡುವ ಕೆಲವು ಕಾರುಗಳನ್ನು ಶೆಟ್ಟಿ ಹೊಂದಿದ್ದಾರೆ. ಶೆಟ್ಟರ ಬಳಿ ಮರ್ಸಿಡೀಸ್ ಬೆಂಜ್ ಜಿಎಲ್ಎಸ್, ಬಿಎಂಡಬ್ಲು ಎಕ್ಸ್5, ಹಮ್ಮರ್ ಎಚ್2, ರೇಂಜ್ ರೋವರ್ ವೋಗ್, ಜೀಪ್ ವ್ರಾಂಗ್ಲರ್ ಇನ್ನೂ ಕೆಲವು ದುಬಾರಿ ಕಾರುಗಳಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ