IPL ಮುಗಿಯೋವರೆಗೂ ನೀ ನನ್ನ ಮಗನೇ ಅಲ್ಲ: ಸುನಿಲ್ ಶೆಟ್ಟಿ-ಕೆಎಲ್ ರಾಹುಲ್ ವಿಡಿಯೋ ವೈರಲ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ. ಈ ಟೂರ್ನಿಯ ಆರಂಭದ ಬೆನ್ನಲ್ಲೇ ಡ್ರೀಮ್ 11 ಆ್ಯಪ್ ಹಲವು ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಅವುಗಳಲ್ಲಿ ಕೆಎಲ್ ರಾಹುಲ್, ಸುನಿಲ್ ಶೆಟ್ಟಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಂಡಿರುವ ಆ್ಯಡ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರಂಗೇರಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದ ಮೂಲಕ ಐಪಿಎಲ್ ಸೀಸನ್-17 ಗೆ ಅದ್ಧೂರಿ ಚಾಲನೆ ನೀಡಲಾಗಿದೆ. ಅತ್ತ ಐಪಿಎಲ್ ಪಂದ್ಯಗಳು ಕಿಕ್ಕೇರಿಸುತ್ತಿದ್ದರೆ, ಇತ್ತ ಐಪಿಎಲ್ ಜಾಹೀರಾತುಗಳು ಕೂಡ ಅಭಿಮಾನಿಗಳಿಗೆ ಕಚಗುಳಿಯಿಡುತ್ತಿದೆ.
ಅದರಲ್ಲೂ ಬೆಟ್ಟಿಂಗ್ ಆ್ಯಪ್ ಡ್ರೀಮ್ 11 ಬಿಡುಗಡೆ ಮಾಡಿರುವ ಜಾಹೀರಾತೊಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. ಈ ಜಾಹೀರಾತಿನಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಾಗೂ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಸುನಿಲ್ ಶೆಟ್ಟಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಾಗಿ ಹಾಗೂ ರೋಹಿತ್ ಶರ್ಮಾ ಮುಂಬೈ ತಂಡದ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ರೆಸ್ಟೋರೆಂಟ್ನಲ್ಲಿ ಚಿತ್ರೀಕರಿಸಲಾಗಿರುವ ಈ ಜಾಹೀರಾತಿನಲ್ಲಿ ಸುನಿಲ್ ಶೆಟ್ಟಿ ಹಾಗೂ ರೋಹಿತ್ ಶರ್ಮಾ ಊಟಕ್ಕೆ ಕೂತಿರುತ್ತಾರೆ. ಇದೇ ವೇಳೆ ಕೆಎಲ್ ರಾಹುಲ್ ಕೂಡ ಜೊತೆಗೂಡಲು ಬುರತ್ತಾರೆ. ಈ ವೇಳೆ ರೋಹಿತ್ ಶರ್ಮಾ, ನಾವು ಫ್ಯಾಮಿಲಿ ಡಿನ್ನರ್ ಮಾಡ್ತಿದ್ದೇವೆ ಎನ್ನುತ್ತಾರೆ.
ಈ ವೇಳೆ ಆಶ್ಚರ್ಯದಿಂದ ಸುನಿಲ್ ಶೆಟ್ಟಿಯನ್ನು ನೋಡುವ ಕೆಎಲ್ ರಾಹುಲ್, ಪಪ್ಪಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಈ ವೇಳೆ ಸುನಿಲ್ ಶೆಟ್ಟಿ, ನೋ ಪಪ್ಪಾ… ಐಪಿಎಲ್ ಮುಗಿಯುವರೆಗೆ ಶರ್ಮಾ ಅವರ ಮಗ ನನ್ನ ಮಗ ಎಂದು ರೋಹಿತ್ ಶರ್ಮಾ ಅವರನ್ನು ತೋರಿಸುತ್ತಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Family time over @klrahul, ab rivalry time shuru ho gaya hai! 😌@SunielVShetty ab hue humare 🙌 . .#Ad #Dream11 #TeamSeBadaKuchNahi pic.twitter.com/B5lljX3adE
— Rohit Sharma (@ImRo45) March 20, 2024
ಅಂದಹಾಗೆ ಕೆಎಲ್ ರಾಹುಲ್ ನಿಜ ಜೀವನದಲ್ಲಿ ಸುನಿಲ್ ಶೆಟ್ಟಿ ಅವರ ಅಳಿಯ. ಮಗಳು ಅಥಿಯಾ ಶೆಟ್ಟಿಯನ್ನು ವಿವಾಹವಾಗಿರುವ ರಾಹುಲ್ ನನ್ನ ಇನ್ನೊಬ್ಬ ಮಗ ಎಂದೇ ಸುನಿಲ್ ಶೆಟ್ಟಿ ಹಲವು ಕಡೆ ಹೇಳಿಕೊಂಡಿದ್ದಾರೆ. ಇದೀಗ ಇದೇ ಬಾಂಧವ್ಯವನ್ನು ವಿಭಿನ್ನ ರೀತಿಯಲ್ಲಿ ಜಾಹೀರಾತಿನಲ್ಲಿ ಬಳಸಿಕೊಂಡು ಎಲ್ಲರ ಗಮನ ಸೆಳೆಯುವಲ್ಲಿ ಡ್ರೀಮ್ 11 ಯಶಸ್ವಿಯಾಗಿದೆ.