Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ

‘ಬಾರ್ಡರ್’ ಸಿನಿಮಾದ ಸೀಕ್ವೆಲ್ ಎಂಬ ಕಾರಣಕ್ಕೆ ‘ಬಾರ್ಡರ್ 2’ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗಿತ್ತು. ಈ ಸಿನಿಮಾವನ್ನು ಕೆಲವರು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಆದರೆ ಇನ್ನು ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ‘ಎಕ್ಸ್’ (ಟ್ವಿಟರ್) ಪೋಸ್ಟ್ ಮೂಲಕ ಪ್ರೇಕ್ಷಕರು ‘ಬಾರ್ಡರ್ 2’ ಸಿನಿಮಾದ ವಿಮರ್ಶೆ ತಿಳಿಸಿದ್ದಾರೆ. ಇಲ್ಲಿದೆ ವಿವರ..

Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ
Border 2 Poster

Updated on: Jan 23, 2026 | 10:20 PM

ಬಿಡುಗಡೆಗೂ ಮುನ್ನವೇ ‘ಬಾರ್ಡರ್ 2’ ಸಿನಿಮಾ ಸಖತ್ ಸುದ್ದಿ ಆಗಿತ್ತು. ಟ್ರೇಲರ್ ಮತ್ತು ಹಾಡಿನಲ್ಲಿ ವರುಣ್ ಧವನ್ (Varun Dhawan) ಅವರ ನಟನೆಯನ್ನು ನೋಡಿ ಕೆಲವರು ಟ್ರೋಲ್ ಮಾಡಿದ್ದರು. ಜನವರಿ 23ರಂದು ಈ ಸಿನಿಮಾ ಬಿಡುಗಡೆ ಆಗಿದೆ. ದೇಶಭಕ್ತಿ ಕಥಾಹಂದರ ಇರುವ ಸಿನಿಮಾ ಎಂಬ ಕಾರಣಕ್ಕೆ ಪ್ರೇಕ್ಷಕರಲ್ಲಿ ಈ ಸಿನಿಮಾ ಕೌತುಕ ಸೃಷ್ಟಿ ಮಾಡಿತ್ತು. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಬಹುತೇಕ ಪ್ರೇಕ್ಷಕರಿಗೆ ‘ಬಾರ್ಡರ್ 2’ (Border 2) ಸಿನಿಮಾ ಇಷ್ಟ ಆಗಿದೆ. ಕೆಲವರಿಗೆ ಇಷ್ಟ ಆಗಿಲ್ಲ. ಹಾಗಾಗಿ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

1997ರಲ್ಲಿ ‘ಬಾರ್ಡರ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಸೀಕ್ವೆಲ್ ಆಗಿ ಈಗ ‘ಬಾರ್ಡರ್ 2’ ರಿಲೀಸ್ ಆಗಿದೆ. ಅನುರಾಗ್ ಸಿಂಗ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ, ದಿಲ್ಜಿತ್ ದೊಸಾಂಜ್, ಮೋನಾ ಸಿಂಗ್, ಸೋನಂ ಭಾಜ್ವ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. 1971ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಸಿದ್ಧವಾಗಿದೆ. ‘ಬಾರ್ಡರ್ ಚಿತ್ರದ ಪರಂಪರೆಯನ್ನು ಬಾರ್ಡರ್ 2 ಸಿನಿಮಾ ಮುಂದುವರಿಸಿದೆ. ಕೊನೇ ದೃಶ್ಯದ ತನಕ ರೋಮಾಂಚನ ಆಗುತ್ತದೆ. ಸಿನಿಮಾ ತುಂಬಾ ಚೆನ್ನಾಗಿದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.

‘ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ. ಪರಿಣಾಮಕಾರಿಯಾದ ಸಂಭಾಷಣೆಗಳಿವೆ. ಬಿಗಿಯಾದ ನಿರೂಪಣೆಯಿಂದಾಗಿ ಇದು ನೋಡಲೇಬೇಕಾದ ಸಿನಿಮಾ ಆಗಿದೆ’ ಎಂದು ಪ್ರೇಕ್ಷಕರು ಹೊಗಳಿದ್ದಾರೆ. ದೇಶಭಕ್ತಿಯ ಕಹಾನಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಬಹುತಾರಾಗಣ ಇರುವ ಸಿನಿಮಾ ಆದ್ದರಿಂದ ಮೊದಲ ದಿನ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆದುಕೊಂಡಿದೆ.

ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ‘ಈ ಮೊದಲು ಬಂದಿದ್ದ ಬಾರ್ಡರ್ ಸಿನಿಮಾದಲ್ಲಿ ಸೈನಿಕರ ಮತ್ತು ಕುಟುಂಬದವರ ನೋವಿನ ಕಥೆಯನ್ನು ಯುದ್ಧದ ಹಿನ್ನೆಲೆಯಲ್ಲಿ ತೋರಿಸಲಾಗಿತ್ತು. ಆದರೆ ಬಾರ್ಡರ್ 2 ಕಳಪೆ ವಿಎಫ್​ಎಕ್ಸ್ ಹೊಂದಿರುವ ಒಂದು ಯುದ್ಧದ ಸಿನಿಮಾ ಅಷ್ಟೇ’ ಎಂದು ಪ್ರೇಕ್ಷಕರೊಬ್ಬರು ಈ ಸಿನಿಮಾವನ್ನು ತೆಗಳಿದ್ದಾರೆ.

ಮೂಲ ಸಿನಿಮಾದ ಮೋಡಿಯನ್ನು ಮರುಸೃಷ್ಟಿ ಮಾಡುವಲ್ಲಿ ‘ಬಾರ್ಡರ್ 2’ ಚಿತ್ರ ವಿಫಲವಾಗಿದೆ. ಕಥೆ ಕಳಪೆ ಆಗಿದೆ. ಸುಲಭವಾಗಿ ಊಹಿಸಬಹುದಾದ ಯುದ್ಧದ ಸನ್ನಿವೇಶಗಳು ಇವೆ. ಬಲವಂತಹ ದೇಶಭಕ್ತಿ, ಕಳಪೆ ವಿಎಫ್​ಎಕ್ಸ್ ಇದೆ. ಹಾಡಿಗಳು ಚೆನ್ನಾಗಿವೆ. ಆದರೆ ಮನಮುಟ್ಟುವಂತಿಲ್ಲ’ ಎಂದು ಕೂಡ ನೆಟ್ಟಿಗರೊಬ್ಬರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

‘ಧುರಂಧರ್’ ಸಿನಿಮಾ ಬಿಡುಗಡೆ ಆದ ಬಳಿಕ ‘ಬಾರ್ಡರ್ 2’ ಸಿನಿಮಾ ಬಂದಿದೆ. ಎರಡರಲ್ಲೂ ದೇಶಭಕ್ತಿ ಕಥಾಹಂದರ ಇದೆ. ‘ಧುರಂದರ್’ ಸಿನಿಮಾದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಕೆಲವರು ‘ಬಾರ್ಡರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅಂಥವರಿಗೂ ಈ ಸಿನಿಮಾ ಇಷ್ಟ ಆಗಿಲ್ಲ. ಆದರೆ ಸನ್ನಿ ಡಿಯೋಲ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.