ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ತಮ್ಮ ನೇರ ನಡೆ-ನುಡಿಯಿಂದ ಗುರುತಿಸಿಕೊಂಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಅವರು ತಮ್ಮ ಅನಿಸಿಕೆಯನ್ನು ನೇರವಾಗಿ ಹಂಚಿಕೊಂಡಿದ್ದುಂಟು. ಅವರಿಗೆ ಟ್ರೋಲ್ ಕಾಟ ಏನೂ ಹೊಸದಲ್ಲ. ಆದರೆ ಈಗ ಅವರನ್ನು ತೀರಾ ವೈಯಕ್ತಿಕ ವಿಚಾರದಲ್ಲೂ ಟ್ರೋಲ್ ಮಾಡಲಾಗುತ್ತಿದೆ. ಸ್ವರಾ ಭಾಸ್ಕರ್ ಅವರು ತಾವು ಪ್ರೆಗ್ನೆಂಟ್ ಎಂಬುದನ್ನು ಘೋಷಿಸಿಕೊಂಡಿದ್ದಾರೆ. ರಾಜಕಾರಣಿ ಫಹಾದ್ ಅಹ್ಮದ್ (Fahad Ahmad) ಜೊತೆ ಅವರ ಈ ವರ್ಷ ಫೆಬ್ರವರಿ 16ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ವರಾ ಈಗ ನಾಲ್ಕು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ. ಮದುವೆ ಆಗಿ ಕೇವಲ ಮೂರೂವರೆ ತಿಂಗಳಿಗೆ ಅವರು ನಾಲ್ಕು ತಿಂಗಳ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ವಿಚಾರವನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ (Swara Bhaskar Troll) ಮಾಡಲಾಗುತ್ತಿದೆ.
ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಅವರು ಮದುವೆ ಆಗಿದ್ದು ತುಂಬ ಸಿಂಪಲ್ ಆಗಿ. ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪತಿ ಜೊತೆ ಇರುವ ಫೋಟೋವನ್ನು ಸ್ವರಾ ಭಾಸ್ಕರ್ ಶೇರ್ ಮಾಡಿಕೊಂಡಿದ್ದಾರೆ. ‘ಕೆಲವೊಮ್ಮೆ ನಿಮ್ಮ ಎಲ್ಲ ಪ್ರಾರ್ಥನೆಗಳಿಗೆ ಒಟ್ಟಿಗೆ ಉತ್ತರ ಸಿಗುತ್ತದೆ. ನಾವು ಹೊಸ ಜಗತ್ತಿಗೆ ಕಾಲಿಡುವಾಗ ಕೃತಜ್ಞರಾಗಿದ್ದೇವೆ, ಗೊಂದಲದಲ್ಲಿದ್ದೇವೆ, ಎಗ್ಸೈಟ್ ಆಗಿದ್ದೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜೊತೆ #OctoberBaby ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಆದ್ದರಿಂದ ಅಕ್ಟೋಬರ್ನಲ್ಲಿ ಮಗು ಜನಿಸಲಿದೆ ಎಂಬ ಸುಳಿವು ಸಿಕ್ಕಿದೆ.
ಅಕ್ಟೋಬರ್ನಲ್ಲಿ ಮಗು ಜನಿಸಲಿದೆ ಎಂದರೆ ಸ್ವರಾ ಭಾಸ್ಕರ್ ಅವರಿಗೆ ಈಗ ನಾಲ್ಕು ತಿಂಗಳು ಎಂದರ್ಥ. ಆದರೆ ಅವರು ಮದುವೆ ಆಗಿ ಇನ್ನೂ ನಾಲ್ಕು ತಿಂಗಳು ಪೂರ್ಣಗೊಂಡಿಲ್ಲ. ಆದ್ದರಿಂದ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅವುಗಳಿಗೆಲ್ಲ ಸ್ವರಾ ಭಾಸ್ಕರ್ ಅವರು ತಲೆ ಕೆಡಿಸಿಕೊಂಡಿಲ್ಲ. ಅನೇಕ ಸೆಲೆಬ್ರಿಟಿಗಳು ಸ್ವರಾ ಭಾಸ್ಕರ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಅಪ್ಪಟ ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ಖುಷಿ ಆಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಂದ ಸ್ವರಾ ಭಾಸ್ಕರ್ ಅವರು ಬ್ರೇಕ್ ಪಡೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಅವರದ್ದು ಅಂತರಧರ್ಮೀಯ ಮದುವೆ ಆದ್ದರಿಂದ ನೆಟ್ಟಿಗರು ಇವರನ್ನು ಟ್ರೋಲ್ ಮಾಡಿದ್ದರು. ದೆಹಲಿಯಲ್ಲಿ ಮುಸ್ಲಿಂ ಪ್ರಿಯಕರನಿಂದ ಕೊಲೆಯಾದ ಹಿಂದೂ ಯುವತಿ ಶ್ರದ್ಧಾ ವಾಕರ್ ರೀತಿಯೇ ಸ್ವರಾ ಭಾಸ್ಕರ್ ಅವರಿಗೂ ಆಗಲಿದೆ ಎಂದು ಅನೇಕರು ಟೀಕೆ ಮಾಡಿದ್ದರು. ದ್ವೇಷಿಸುವವರು ಫ್ರಿಡ್ಜ್, ಸೂಟ್ಕೇಸ್, ಅಕ್ರಮ ಮದುವೆ, ಮತಾಂತರ, ಅದು ಇದು ಅಂತಾರೆ. ಆದರೆ ತಾವು ಸಖತ್ ಖುಷಿಯಾಗಿ ಇರುವುದಾಗಿ ಸ್ವರಾ ಭಾಸ್ಕರ್ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.